ಹೊಸದಿಲ್ಲಿ, ನ. 23: ಎಂಟು ವರ್ಷಗಳ ಹಿಂದಿನ ಕ್ರಿಮಿನಲ್ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಯೂಟ್ಯೂಬರ್ ಧ್ರುವ ರಾಠಿ ವಿರುದ್ಧ ದಿಲ್ಲಿಯ ಸಾಕೇತ್ ನ್ಯಾಯಾಲಯ ಸೋಮವಾರ ಜಾಮೀನುರಹಿತ ಬಂಧನ ವಾರಂಟ್ ಜಾರಿಗೊಳಿಸಿದೆ.
‘ಐ ಸಪೋರ್ಟ್ ನರೇಂದ್ರ ಮೋದಿ’ ಎಂಬ ಫೇಸ್ಬುಕ್ ಪುಟದ ಸಂಸ್ಥಾಪಕ ವಿಕಾಸ್ ಪಾಂಡೆ ಸಲ್ಲಿಸಿರುವ ದೂರಿನ ವಿಚಾರಣೆ ನಡೆಸಿದ ಪ್ರಥಮ ದರ್ಜೆ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅನಮ್ ರಯೀಸ್ ಖಾನ್ ಈ ಆದೇಶ ಹೊರಡಿಸಿದ್ದಾರೆ.
2018ರಲ್ಲಿ ಧ್ರುವ ರಾಠಿ ಪ್ರಕಟಿಸಿದ್ದ ‘ಬಿಜೆಪಿ ಐಟಿ ಸೆಲ್ ಪಾರ್ಟ್-2’ ಎಂಬ ಶೀರ್ಷಿಕೆಯ ವೀಡಿಯೊದಲ್ಲಿ ತಮ್ಮ ವಿರುದ್ಧ ಸುಳ್ಳು ಹಾಗೂ ಮಾನಹಾನಿಕರ ಆರೋಪಗಳನ್ನು ಮಾಡಲಾಗಿದೆ. ಇದರಿಂದ ತಮ್ಮ ವೈಯಕ್ತಿಕ ಪ್ರತಿಷ್ಠೆಗೆ ಧಕ್ಕೆಯಾಗಿದೆ ಎಂದು ಪಾಂಡೆ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ನ್ಯಾಯಾಲಯವು ಈ ಹಿಂದೆ ಧ್ರುವ ರಾಠಿಗೆ ಸಮನ್ಸ್ ಹಾಗೂ ಎರಡು ಬಾರಿ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಿತ್ತು. ಇದೀಗ ಜಾಮೀನುರಹಿತ ವಾರಂಟ್ ಹೊರಡಿಸಿದೆ.
ಪ್ರಸ್ತುತ ಜರ್ಮನಿಯಲ್ಲಿ ನೆಲೆಸಿರುವ ಧ್ರುವ ರಾಠಿ, ಕಳೆದ ಅಕ್ಟೋಬರ್ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿದ್ದರು. ದಿಲ್ಲಿಯಲ್ಲಿ ಪ್ರತಿಭಟನೆ ಆರಂಭವಾಗುವ ಮುನ್ನವೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು ಎಂದು ವರದಿಯಾಗಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಡಿಸೆಂಬರ್ 3ಕ್ಕೆ ನಿಗದಿಪಡಿಸಿದೆ.