ಹೊಸದಿಲ್ಲಿ, ನ. 23: ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಹೆಸರು ಕೈಬಿಡಲಾದ ನಾಗರಿಕರ ಮೇಲ್ಮನವಿಗಳಿಗೆ ಮೊದಲ ಆದ್ಯತೆ ನೀಡಬೇಕು. ಹೆಸರು ಸೇರ್ಪಡೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸದ್ಯಕ್ಕೆ ಮುಂದೂಡಬೇಕು ಎಂದು ಸುಪ್ರೀಂ ಕೋರ್ಟ ಸೋಮವಾರ ನಿರ್ದೇಶಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠ, ಅರ್ಹ ಮತದಾರರ ಮತದಾನದ ಹಕ್ಕಿನ ರಕ್ಷಣೆ ದೃಷ್ಟಿಯಿಂದ ಈ ನಿರ್ದೇಶನ ನೀಡಿದೆ.
ಮೇಲ್ಮನವಿ ನ್ಯಾಯಮಂಡಳಿಗಳು ಅರ್ಜಿಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಬೇಕು. ಪಟ್ಟಿಯಿಂದ ಹೆಸರು ಅಳಿಸಲ್ಪಟ್ಟವರ ಮೇಲ್ಮನವಿಗಳನ್ನು ಮೊದಲು ಇತ್ಯರ್ಥಪಡಿಸಬೇಕು. ಹೆಸರು ಸೇರ್ಪಡೆ ವಿರುದ್ಧದ ಅರ್ಜಿಗಳಲ್ಲಿ ತುರ್ತು ಅಗತ್ಯವಿಲ್ಲದ ಕಾರಣ ಅವುಗಳ ವಿಚಾರಣೆ ಮುಂದೂಡಬಹುದು ಎಂದು ಪೀಠ ತಿಳಿಸಿದೆ.
38 ಲಕ್ಷ ಮೇಲ್ಮನವಿ; ಇತ್ಯರ್ಥವಾಗಿದ್ದು ಒಂದು ಲಕ್ಷ ಮಾತ್ರ
ವಿಚಾರಣೆ ವೇಳೆ ವಕೀಲ ಪ್ರಶಾಂತ್ ಭೂಷಣ್, ಒಟ್ಟು 38 ಲಕ್ಷ ಮೇಲ್ಮನವಿಗಳಲ್ಲಿ ಒಂದು ಲಕ್ಷಕ್ಕೂ ಸ್ವಲ್ಪ ಹೆಚ್ಚಿನ ಪ್ರಕರಣಗಳು ಮಾತ್ರ ಇತ್ಯರ್ಥಗೊಂಡಿವೆ. ಅವುಗಳಲ್ಲಿ ಶೇ. 93ರಷ್ಟು ತೀರ್ಪುಗಳು ಮತದಾರರ ಪರವಾಗಿವೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಕೋಲ್ಕತ್ತಾ ಮಹಾನಗರ ವ್ಯಾಪ್ತಿಯಲ್ಲಿಯೇ ಎರಡು ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಕೈಬಿಡಲಾಗಿದ್ದು, ಅವರ ಮೇಲ್ಮನವಿಗಳು ಬಾಕಿಯಿವೆ ಎಂದು ವಿವರಿಸಿದರು.
ಕೋಲ್ಕತ್ತಾ ಮಹಾನಗರ ಪಾಲಿಕೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಮತದಾರರ ಮೇಲ್ಮನವಿಗಳಿಗೆ ವಿಶೇಷ ಆದ್ಯತೆ ನೀಡಬೇಕು. ಕಲ್ಕತ್ತಾ ಹೈಕೋರ್ಟನೊಂದಿಗೆ ಸಮಾಲೋಚಿಸಿ ಮೇಲ್ಮನವಿ ನ್ಯಾಯಮಂಡಳಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಅಗತ್ಯ ಮೂಲಸೌಕರ್ಯ ಹಾಗೂ ಪರ್ಯಾಯ ಕಟ್ಟಡಗಳನ್ನು ಒದಗಿಸಬೇಕು ಎಂದು ಚುನಾವಣಾ ಆಯೋಗಕ್ಕೆ ಪೀಠ ಸೂಚಿಸಿದೆ.
ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, ಮುಖ್ಯ ಚುನಾವಣಾಧಿಕಾರಿಯೇ ಮತದಾರರ ಹೆಸರು ಸೇರ್ಪಡೆ ವಿರುದ್ಧ ಮೇಲ್ಮನವಿ ಸಲ್ಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ಚುನಾವಣಾ ನಿಯಮಗಳ 23ನೇ ನಿಯಮದ ಪ್ರಕಾರ, ಮುಖ್ಯ ಚುನಾವಣಾಧಿಕಾರಿಗೆ ಇಂತಹ ಮೇಲ್ಮನವಿ ಸಲ್ಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ. ಚುನಾವಣಾ ಆಯೋಗವೇ ತನ್ನ ಅಧೀನದ ಮೇಲ್ಮನವಿ ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸುವುದು ಪ್ರಶ್ನಾರ್ಹ ಎಂದು ವಾದಿಸಿದರು.
ಈ ವಾದಗಳನ್ನು ಆಲಿಸಿದ ಪೀಠ, ಹೆಸರು ಸೇರ್ಪಡೆ ವಿರುದ್ಧದ ಮೇಲ್ಮನವಿಗಳನ್ನು ಮುಂದೂಡಿ, ಪಟ್ಟಿಯಿಂದ ಹೆಸರು ಕಳೆದುಕೊಂಡವರ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಇತ್ಯರ್ಥಪಡಿಸುವಂತೆ ನಿರ್ದೇಶಿಸಿತು.