ಹೊಸದಿಲ್ಲಿ, ನ. 11: ಮಧ್ಯಪ್ರಾಚ್ಯದಲ್ಲಿ ಯುದ್ಧದ ಉದ್ವಿಗ್ನತೆ ಮುಂದುವರಿದಿರುವ ನಡುವೆಯೇ ಪರ್ಷಿಯನ್ ಕೊಲ್ಲಿಯಲ್ಲಿ ಸಾಗುತ್ತಿದ್ದ ತೈಲ ಸಾಗಣೆ ಹಡಗಿನ ಮೇಲೆ ದಾಳಿ ನಡೆದಿದ್ದು, ಒಬ್ಬ ಭಾರತೀಯ ಸೇರಿದಂತೆ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಹಡಗಿನಲ್ಲಿದ್ದ ಉಳಿದ ಐವರು ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಕೇಂದ್ರ ಬಂದರು, ಹಡಗು ಸಾರಿಗೆ ಮತ್ತು ಜಲಮಾರ್ಗಗಳ ಸಚಿವ ಸರ್ಬಾನಂದ ಸೋನೊವಾಲ್ ತಿಳಿಸಿದ್ದಾರೆ.
ಲೈಬೀರಿಯಾ ಧ್ವಜ ಹೊಂದಿರುವ 'ಎಂಟಿ ಫುಜೈರಾ ಎನರ್ಜಿ' ಹೆಸರಿನ ಬೃಹತ್ ತೈಲ ಸಾಗಣೆ ಹಡಗು ನವೆಂಬರ್ 10ರಂದು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಲ್ ರುವೈಸ್‌ನಿಂದ ದುಬೈ ಕಡೆಗೆ ಪ್ರಯಾಣಿಸುತ್ತಿದ್ದಾಗ ಸ್ಫೋಟಕ ವಸ್ತುವೊಂದು ಹಡಗಿಗೆ ಅಪ್ಪಳಿಸಿದೆ.
ಘಟನೆಯಲ್ಲಿ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದು, ಅವರಲ್ಲಿ ಒಬ್ಬ ಭಾರತೀಯನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ಭಾರತೀಯ ಸಿಬ್ಬಂದಿಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.
ದಾಳಿಗೊಳಗಾದ ಹಡಗಿನಲ್ಲಿ ಒಟ್ಟು 22 ಸಿಬ್ಬಂದಿ ಇದ್ದರು. ಅವರಲ್ಲಿ ಆರು ಮಂದಿ ಭಾರತೀಯರಾಗಿದ್ದರು. ದಾಳಿಯಲ್ಲಿ ಒಬ್ಬ ಭಾರತೀಯ ಗಾಯಗೊಂಡಿದ್ದರೆ, ಉಳಿದ ಐವರು ಭಾರತೀಯರು ಸೇರಿದಂತೆ 18 ಮಂದಿ ಸುರಕ್ಷಿತವಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವ ಸರ್ಬಾನಂದ ಸೋನೊವಾಲ್, ಹಡಗಿನ ಸಿಬ್ಬಂದಿಯ ಸುರಕ್ಷತೆ ಮತ್ತು ವೈದ್ಯಕೀಯ ನೆರವಿನ ಕುರಿತು ಕೇಂದ್ರ ಸರ್ಕಾರ ನಿರಂತರ ನಿಗಾ ವಹಿಸಿದೆ ಎಂದು ತಿಳಿಸಿದ್ದಾರೆ.
ಹಡಗು ನಿರ್ವಹಣಾ ಸಂಸ್ಥೆಯೊಂದಿಗೆ ಸಂಪರ್ಕದಲ್ಲಿದ್ದು, ಭಾರತೀಯ ನಾವಿಕರಿಗೆ ಅಗತ್ಯ ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿಯಲ್ಲಿ ಹೆಚ್ಚಿದ ಆತಂಕ
ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಪರ್ಷಿಯನ್ ಕೊಲ್ಲಿ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸುರಕ್ಷತೆ ಕುರಿತು ಆತಂಕ ಹೆಚ್ಚಾಗಿದೆ.
ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ದಾಳಿ ನಡೆಯುತ್ತಿರುವುದು ಅಂತಾರಾಷ್ಟ್ರೀಯ ವ್ಯಾಪಾರ ಹಾಗೂ ಇಂಧನ ಪೂರೈಕೆಗೆ ಸವಾಲಾಗಿದೆ.
ಇದೇ ವೇಳೆ ಬುಧವಾರ ಹಾರ್ಮುಜ್ ಜಲಸಂಧಿಯಲ್ಲಿ ಸಾಗುತ್ತಿದ್ದ ಸೌದಿ ಅರೇಬಿಯಾ ಧ್ವಜದ 'ಎನ್‌ಸಿಸಿ ಫಜ್ರ್' ತೈಲ ಹಡಗು ಕೂಡ ಸಂಭವನೀಯ ದಾಳಿಗೆ ಒಳಗಾಗಿದೆ. ಈ ಹಡಗಿನಲ್ಲಿದ್ದ ಮೂವರು ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಎಂದು ಸಚಿವ ಸೋನೊವಾಲ್ ತಿಳಿಸಿದ್ದಾರೆ.
ಸತತ ಎರಡು ದಿನಗಳಲ್ಲಿ ತೈಲ ಹಡಗುಗಳ ಮೇಲೆ ದಾಳಿ ನಡೆದಿರುವುದು ಮಧ್ಯಪ್ರಾಚ್ಯದ ಸಮುದ್ರ ಮಾರ್ಗಗಳಲ್ಲಿನ ಭದ್ರತಾ ಪರಿಸ್ಥಿತಿಯ ಬಗ್ಗೆ ಕಳವಳ ಹೆಚ್ಚಿಸಿದೆ.