LIVE TV LocalCrimeNationalInternationalPoliticsBusinessFinancialEducationTechnologyEntertainmentSportsHealthFeatureTravelingBeauty
Press & Media Credential Portal
✕
1. Apply for Press ID Card
Register official reporter application with Email OTP.
➔
2. Download Approved Badge
Enter Card ID to receive authorization code via email.
3. Verify Reporter ID & Card (View Only)
For Public & Police: Check if card is authentic.
State News

ಬರ ಪರಿಹಾರ ವಿತರಣೆಯಲ್ಲಿನ ಲೋಪ ಸರಿಪಡಿಸಲು ಸೂಚನೆ

ಬೆಂಗಳೂರು, ನ. 11: ರಾಜ್ಯದ ಬರಪೀಡಿತ ಪ್ರತಿಯೊಬ್ಬ ಅರ್ಹ ರೈತ ಕುಟುಂಬಕ್ಕೂ ಎರಡು ಕಂತುಗಳಲ್ಲಿ ಒಟ್ಟು ₹5,000 ಪರಿಹಾರ ನೀಡಲಾಗುವುದು. ಮೊದಲ ಕಂತಿನ ಹಣ ಈಗಾಗಲೇ ಅನೇಕ ರೈತರ ಖಾತೆಗಳಿಗೆ ಜಮೆಯಾಗಿದ್ದು, ಹಣ ತಲುಪದವರು ಆತಂಕಪಡುವ ಅಗತ್ಯವಿಲ್ಲ. ಬ್ಯಾಂಕ್ ಖಾತೆಗಳಲ್ಲಿನ ಲೋಪಗಳನ್ನು ಸರಿಪಡಿಸಿ ಎಲ್ಲ ಅರ್ಹ ಫಲಾನುಭವಿಗಳಿಗೂ ಪರಿಹಾರ ತಲುಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಭರವಸೆ ನೀಡಿದರು.

ಬುಧವಾರ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡದಿದ್ದರೂ ರಾಜ್ಯ ಸರ್ಕಾರ ನೀಡಿರುವ ಭರವಸೆಯಂತೆ ರೈತರಿಗೆ ಹಣ ಪಾವತಿಸಲಿದೆ. ಕೆಲವು ರೈತರ ಬ್ಯಾಂಕ್ ಖಾತೆಗಳ ವಿವರಗಳು ಸರಿಯಾಗಿಲ್ಲ. ಇನ್ನೂ ಕೆಲವು ಖಾತೆಗಳು ಸಾಲದ ಖಾತೆಗಳೊಂದಿಗೆ ಸಂಪರ್ಕ ಹೊಂದಿರುವುದರಿಂದ ಹಣ ವರ್ಗಾವಣೆಯಲ್ಲಿ ವಿಳಂಬವಾಗಿದೆ. ದಾಖಲೆಗಳನ್ನು ಪರಿಶೀಲಿಸಿ ಸಮಸ್ಯೆ ನಿವಾರಿಸಲಾಗುವುದು ಎಂದು ತಿಳಿಸಿದರು.

ಪರಿಹಾರದ ಮೊತ್ತದಲ್ಲಿ ವ್ಯತ್ಯಾಸವಾಗಿದ್ದರೂ ಅದನ್ನು ಸರಿಪಡಿಸಲಾಗುವುದು. ಪ್ರತಿಯೊಬ್ಬ ಅರ್ಹ ರೈತನಿಗೂ ನಿಗದಿಪಡಿಸಿದ ಮೊತ್ತ ತಲುಪುವಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಪರಿಹಾರ ವಿತರಣೆಯಲ್ಲಿ ಅಧಿಕಾರಿಗಳಿಂದ ಲೋಪ

ಪರಿಹಾರ ವಿತರಣೆಯಲ್ಲಿ ಉಂಟಾಗಿರುವ ವ್ಯತ್ಯಾಸವನ್ನು ಸರಿಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ತಿಳಿಸಿದರು.

ಸದಾಶಿವನಗರದ ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ರೈತ ಕುಟುಂಬಕ್ಕೆ ಮೊದಲ ಕಂತಿನಲ್ಲಿ ₹2,500 ನೀಡಲು ಸರ್ಕಾರ ನಿರ್ಧರಿಸಿತ್ತು. ಆದರೆ ಅಧಿಕಾರಿಗಳು ಆದೇಶವನ್ನು ತಪ್ಪಾಗಿ ಅರ್ಥೈಸಿಕೊಂಡು ಕೆಲವು ರೈತರಿಗೆ ₹1,500 ಹಾಗೂ ಕೆಲವರಿಗೆ ₹2,000 ಮಾತ್ರ ಪಾವತಿಸಿದ್ದಾರೆ. ಪ್ರತಿ ಎಕರೆಗೆ ಪರಿಹಾರ ಲೆಕ್ಕ ಹಾಕಿರುವುದರಿಂದ ಈ ವ್ಯತ್ಯಾಸ ಉಂಟಾಗಿರುವ ಸಾಧ್ಯತೆಯಿದೆ ಎಂದು ವಿವರಿಸಿದರು.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಗಳನ್ನು ಸರಿಯಾಗಿ ಅನುಸರಿಸುವಂತೆ ಸೂಚಿಸಲಾಗಿದೆ. ಪರಿಹಾರ ವಿತರಣೆಗೆ ಹಣಕಾಸಿನ ಕೊರತೆಯಿಲ್ಲ. ಅಗತ್ಯ ಅನುದಾನವನ್ನು ಈಗಾಗಲೇ ಒದಗಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮೊದಲ ಹಂತದಲ್ಲಿ ಸುಮಾರು 50 ಲಕ್ಷ ರೈತ ಕುಟುಂಬಗಳಿಗೆ ತಲಾ ₹2,500 ನೀಡಲು ₹1,250 ಕೋಟಿ ಅಂದಾಜಿಸಲಾಗಿದೆ. ಎರಡನೇ ಹಂತದಲ್ಲಿಯೂ ಅಷ್ಟೇ ಮೊತ್ತ ಒದಗಿಸುವ ಮೂಲಕ ಒಟ್ಟು ₹2,500 ಕೋಟಿ ಪರಿಹಾರ ವಿತರಿಸುವ ಉದ್ದೇಶವಿದೆ. ಆದರೆ ಫಲಾನುಭವಿಗಳು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಗಳ ಪ್ರಕಾರ ಅರ್ಹರಾಗಿರಬೇಕು ಎಂದು ತಿಳಿಸಿದರು.

ಈಗಾಗಲೇ ಕಡಿಮೆ ಪರಿಹಾರ ಪಡೆದ ರೈತರಿಗೆ ಬಾಕಿ ಮೊತ್ತವನ್ನು ನೀಡಲಾಗುವುದು. ಅಗತ್ಯವಿದ್ದರೆ ಎರಡನೇ ಕಂತಿನೊಂದಿಗೆ ವ್ಯತ್ಯಾಸದ ಹಣ ಸೇರಿಸಿ ₹3,000 ಅಥವಾ ₹3,500 ಪಾವತಿಸುವ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ. ಹಣಕಾಸು ಇಲಾಖೆಯ ಅನುಮತಿ ದೊರೆತ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಯಾದಗಿರಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಿರುವ ಪ್ರಕ್ರಿಯೆಯನ್ನು ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಹೇಳಿದರು.

ಕೇಂದ್ರದ ಭೇಟಿಗೆ ಸರ್ವಪಕ್ಷ ನಿಯೋಗ

ಬರ ಪರಿಹಾರದ ಕುರಿತು ಚರ್ಚಿಸಲು ಕೇಂದ್ರ ಸರ್ಕಾರದ ಸಮಯಾವಕಾಶ ಕೋರಿ ಪತ್ರ ಬರೆದು ಎರಡು ವಾರಗಳಾದರೂ ಪ್ರತಿಕ್ರಿಯೆ ಬಂದಿಲ್ಲ. ಪ್ರಧಾನಮಂತ್ರಿಗಳ ಭೇಟಿಗೆ ಅವಕಾಶ ದೊರೆತ ಬಳಿಕ ಸರ್ವಪಕ್ಷ ನಿಯೋಗವನ್ನು ದಿಲ್ಲಿಗೆ ಕರೆದೊಯ್ಯುವ ಕುರಿತು ತೀರ್ಮಾನಿಸಲಾಗುವುದು ಎಂದು ಪರಮೇಶ್ವರ ತಿಳಿಸಿದರು.

ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಡಿಮೆಯಾಗಿವೆ ಎಂದು ಹೇಳಿದ ಅವರು, ಕಿರುಸಾಲ ಸಂಸ್ಥೆಗಳ ನಿಯಂತ್ರಣಕ್ಕೆ ಸರ್ಕಾರ ಕಾನೂನು ಜಾರಿಗೆ ತಂದಿದೆ. ಸಾಲ ಮರುಪಾವತಿಯನ್ನು ಆರು ತಿಂಗಳವರೆಗೆ ಮುಂದೂಡುವ ನಿರ್ಧಾರವನ್ನೂ ಪ್ರಕಟಿಸಲಾಗಿದೆ ಎಂದರು.

ಖಾಸಗಿ ಕೈಗಡ ಸಾಲ ನೀಡುವವರ ಕಿರುಕುಳದಿಂದ ರೈತರು ಸಂಕಷ್ಟಕ್ಕೆ ಸಿಲುಕುವ ಪ್ರಕರಣಗಳನ್ನು ತಡೆಯುವ ಅಗತ್ಯವಿದೆ. ಸಹಕಾರಿ ಬ್ಯಾಂಕ್‌ಗಳು ರೈತರಿಗೆ ಸಾಲ ಮರುಪಾವತಿ ನೋಟಿಸ್ ನೀಡುತ್ತಿರುವ ಕುರಿತು ಸರ್ಕಾರ ಈಗಾಗಲೇ ನಿರ್ದೇಶನ ನೀಡಿದ್ದು, ಸಹಕಾರ ಸಚಿವರು ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಸೂಕ್ತ ಸೂಚನೆ ನೀಡಲಿದ್ದಾರೆ ಎಂದು ತಿಳಿಸಿದರು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕೆಪಿಎಸ್‌ಸಿ ಪರೀಕ್ಷೆ: ಚುನಾವಣೆಯಂತೆ ಕಟ್ಟುನಿಟ್ಟಿನ ವ್ಯವಸ್ಥೆಮೋದಿಗೆ ಪ್ರಶ್ನೆ ಕೇಳಿದ್ದ ನಾರ್ವೆ ಪತ್ರಕರ್ತೆಯ ಭಾರತ ಪ್ರವಾಸಕ್ಕೆ ಕೊನೇ ಕ್ಷಣದಲ್ಲಿ ತಡೆಉತ್ತರ ಪ್ರದೇಶದಲ್ಲಿ ಹೊಸ ರಾಜಕೀಯ ಸಮೀಕರಣ: ಒವೈಸಿ–ಆಜಾದ ಮೈತ್ರಿಮೆಟ್ರೊ ಉದ್ಘಾಟನೆಯಲ್ಲಿ ಭಾಷಣಕ್ಕೆ ಅವಕಾಶ ನಿರಾಕರಣೆ: ಕೃಷ್ಣಬೈರೇಗೌಡ ಕಿಡಿದೇಶದ ಯಶೋಗಾಥೆಗಳಿಗೆ ಮಾಧ್ಯಮಗಳು ಆದ್ಯತೆ ನೀಡಲಿ: ಪ್ರಧಾನಿ ಮೋದಿ₹7 ಕೋಟಿ ನೀಡದಿದ್ದರೆ ಕೇಜ್ರಿವಾಲ್, ಪುತ್ರಿಯ ಹತ್ಯೆ: ಬಿಷ್ಣೋಯಿ ಗ್ಯಾಂಗ್ ಬೆದರಿಕೆಹಾಲು, ಬಸ್ ಪ್ರಯಾಣ ದರ ಏರಿಕೆ ಖಂಡಿಸಿ ಜೆಡಿಎಸ್ ಪ್ರತಿಭಟನೆ18ರಿಂದ ಅನುದಾನಿತ ಶಾಲಾ-ಕಾಲೇಜು ಬಂದ್‌ಗೆ ನಿರ್ಧಾರಹೊಲದಲ್ಲಿ ಇಳಿದ ಬೆಳಗಾವಿಗೆ ಬರುತ್ತಿದ್ದ ಹೆಲಿಕಾಪ್ಟ ರ್ಬರ ಪರಿಹಾರ ವಿತರಣೆಯಲ್ಲಿನ ಲೋಪ ಸರಿಪಡಿಸಲು ಸೂಚನೆ