ಹೊಸದಿಲ್ಲಿ, ನ. 12: ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಅವರ ಪುತ್ರಿ ಹರ್ಷಿತಾ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡುವುದಾಗಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೆಸರಿನಲ್ಲಿ ಬೆದರಿಕೆ ಬಂದಿದ್ದು, ₹7 ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿದೆ ಎಂದು ವರದಿಯಾಗಿದೆ.
ದೆಹಲಿಯ ತಿಲಕ್ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜರ್ನೈಲ್ ಸಿಂಗ್ ಅವರ ಮೊಬೈಲ್ಗೆ ಬೆದರಿಕೆ ಕರೆ ಹಾಗೂ ವಾಟ್ಸಾಪ್ ಸಂದೇಶಗಳು ಬಂದಿವೆ. ಕರೆ ಮಾಡಿದ ವ್ಯಕ್ತಿ ತಾನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಸದಸ್ಯನೆಂದು ಪರಿಚಯಿಸಿಕೊಂಡು, ₹7 ಕೋಟಿ ನೀಡದಿದ್ದರೆ ಕೇಜ್ರಿವಾಲ್ ಹಾಗೂ ಅವರ ಪುತ್ರಿ ಹರ್ಷಿತಾ ಅವರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಶಾಸಕ ಜರ್ನೈಲ್ ಸಿಂಗ್ ಅವರು ಪಂಜಾಬ್ನ ಮೊಹಾಲಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಬೆದರಿಕೆ ಕರೆ ಮತ್ತು ಸಂದೇಶಗಳ ಮೂಲ ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದು, ಬೆದರಿಕೆ ಹಾಕಿದ ವ್ಯಕ್ತಿಗೆ ಬಿಷ್ಣೋಯಿ ಗ್ಯಾಂಗ್ನೊಂದಿಗೆ ನಿಜವಾಗಿಯೂ ಸಂಪರ್ಕವಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.