LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಲಾರಿ ಡಿಕ್ಕಿಗೆ ಬೈಕ್ ಸವಾರನ ಸಾವು : ಅವೈಜ್ಞಾನಿಕ ವಿನ್ಯಾಸ ವಿರೋಧಿಸಿ ಪ್ರತಿಭಟನೆ

ಭಟ್ಕಳ, 15:  ರಾಷ್ಟ್ರೀಯ ಹೆದ್ದಾರಿ–66ರ ಮುರ್ಡೇಶ್ವರ ಸಮೀಪದ ಬಸ್ತಿ ಜಂಕ್ಷನ್‌ನಲ್ಲಿ ಲಾರಿಯೊಂದು ಬೈಕ್‌ಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಅಪಘಾತದ ಬಳಿಕ ಹೆದ್ದಾರಿ ಚತುಷ್ಪಥ ಕಾಮಗಾರಿಯ ಅವೈಜ್ಞಾನಿಕ ವಿನ್ಯಾಸವೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿದ ಸ್ಥಳೀಯರು ರಸ್ತೆ ತಡೆದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮೃತರನ್ನು ಮುರ್ಡೇಶ್ವರ ಸಮೀಪದ ಸಬ್ಬತ್ತಿ ನಿವಾಸಿ ಕೃಷ್ಣ ಶನಿಯಾರ್ ನಾಯ್ಕ (55) ಎಂದು ಗುರುತಿಸಲಾಗಿದೆ. ಪೊಲೀಸ್ ಮಾಹಿತಿ ಪ್ರಕಾರ, ಕೃಷ್ಣ ಶನಿಯಾರ್ ನಾಯ್ಕ ಅವರು ಭಟ್ಕಳದಿಂದ ಮುರ್ಡೇಶ್ವರದತ್ತ ಬೈಕಿನಲ್ಲಿ ತೆರಳುತ್ತಿದ್ದರು. ಬಸ್ತಿ ಜಂಕ್ಷನ್‌ನಲ್ಲಿ ಹೆದ್ದಾರಿ ದಾಟಲು ನಿಂತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅವರು ರಸ್ತೆಗೆ ಎಸೆಯಲ್ಪಟ್ಟು ಲಾರಿಯ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ಆರಂಭಿಸಿದರು. ರಾಷ್ಟ್ರೀಯ ಹೆದ್ದಾರಿ–66ರ ಚತುಷ್ಪಥ ಕಾಮಗಾರಿಯನ್ನು ಅವೈಜ್ಞಾನಿಕ ಹಾಗೂ ಕಳಪೆ ರೀತಿಯಲ್ಲಿ ರೂಪಿಸಿರುವುದರಿಂದ ಬಸ್ತಿ ಜಂಕ್ಷನ್‌ನಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ಆರೋಪಿಸಿದರು. ಈ ಭಾಗದಲ್ಲಿ ಸುರಕ್ಷಿತವಾಗಿ ರಸ್ತೆ ದಾಟಲು ಅಗತ್ಯ ವ್ಯವಸ್ಥೆಗಳಿಲ್ಲದಿರುವುದು, ವಾಹನಗಳ ವೇಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿರುವುದು ಹಾಗೂ ಸಂಚಾರ ಸುರಕ್ಷತೆಗೆ ಸಂಬಂಧಿಸಿದ ಮೂಲಭೂತ ಸೌಲಭ್ಯಗಳ ಕೊರತೆಯೇ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ಲಾರಿಯಡಿ ಸಿಲುಕಿದ್ದ ಬೈಕ್ ಹಾಗೂ ಮೃತದೇಹವನ್ನು ಸ್ಥಳಾಂತರಿಸಲು ಅಧಿಕಾರಿಗಳಿಗೆ ಅವಕಾಶ ನೀಡದೆ ಕೆಲಕಾಲ ತೀವ್ರ ಪ್ರತಿಭಟನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಕಾಮಗಾರಿ ನಿರ್ವಹಿಸುತ್ತಿರುವ ಐಆರ್ಬಿ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಬೇಕು. ಮುಂದಿನ ದಿನಗಳಲ್ಲಿ ಇಂತಹ ದುರಂತಗಳು ಮರುಕಳಿಸದಂತೆ ಶಾಶ್ವತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಲಿಖಿತ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.

ಮಾಹಿತಿ ತಿಳಿಯುತ್ತಿದ್ದಂತೆ ಮುರ್ಡೇಶ್ವರ ಹಾಗೂ ಭಟ್ಕಳ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಲು ಮುಂದಾದರು. ಉಪವಿಭಾಗಾಧಿಕಾರಿ (ಡಿವೈಎಸ್ಪಿ), ಸಹಾಯಕ ಆಯುಕ್ತರು, ತಹಶೀಲ್ದಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಐಆರ್ಬಿ ಇನ್ಫ್ರಾಸ್ಟ್ರಕ್ಚರ್ ಸಂಸ್ಥೆಯ ಎಂಜಿನಿಯರ್ ಕೂಡ ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಅಹವಾಲು ಆಲಿಸಿ ಸುರಕ್ಷತಾ ಕ್ರಮಗಳ ಕುರಿತು ಚರ್ಚೆ ನಡೆಸಿದರು.

ಸ್ಥಳೀಯರ ಮನವೊಲಿಕೆಯ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಸಂಬಂಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ನಿಖರ ಕಾರಣ ಹಾಗೂ ಲಾರಿ ಚಾಲಕನ ನಿರ್ಲಕ್ಷ್ಯದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಳಗಾವಿಯಲ್ಲಿ ಮತ್ತೊಂದು ನೂರಾರು ಕೋಟಿ ರೂ. ವಂಚನೆ ಪ್ರಕರಣ!ಬೆಳಗಾವಿಯಲ್ಲಿ ಗುಂಡಿನ ದಾಳಿ: ಆರೋಪಿಗಳ ಬಂಧನಕ್ಕೆ ಎರಡು ವಿಶೇಷ ತಂಡ ರಚನೆಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ ಉಮಾ ಶಂಕರಿಸೋನಮ್ ವಾಂಗಚುಕ್ ಆರೋಗ್ಯ ಗಂಭೀರ; ಬಲವಂತವಾಗಿ ಆಹಾರ ನೀಡುವಂತೆ ದೆಹಲಿ ಹೈಕೋರ್ಟನಲ್ಲಿ ಅರ್ಜಿಇ.ಡಿ ಸಮನ್ಸ್ ಬೆನ್ನಲ್ಲೇ ಮಮತಾ ಬಣ ತೊರೆದ ಮದನ್ ಮಿತ್ರಾಬಾಹ್ಯಾಕಾಶ ನಿಲ್ದಾಣ ತಲುಪಿದ ಭಾರತೀಯ ಮೂಲದ ಅನಿಲ ಮೆನನ್ಅಮೆರಿಕ ದಿಗ್ಬಂಧನಕ್ಕೆ ಇರಾನ್ ತಿರುಗೇಟು; ತೈಲ ರಫ್ತು ಸ್ಥಗಿತದ ಎಚ್ಚರಿಕೆಧರ್ಮಸ್ಥಳ ಪ್ರಕರಣ: 7,000 ಪುಟಗಳ ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಕೆ'ಸ್ತನ ಹಿಡಿದರೆ ಅತ್ಯಾಚಾರ ಯತ್ನವಲ್ಲ' ಎಂದ ಹೈಕೋರ್ಟ: ಸುಪ್ರೀಮ ಕೋರ್ಟ ತರಾಟೆಕಂದಾಯ ಇಲಾಖೆಯಲ್ಲಿ ಭಾರಿ ವರ್ಗಾವಣೆ; 30ಕ್ಕೂ ಹೆಚ್ಚು ತಹಶೀಲ್ದಾರಗಳಿಗೆ ಹೊಸ ನಿಯುಕ್ತಿ