ಇಂಫಾಲ್, ನ. 13: ಜನಾಂಗೀಯ ಸಂಘರ್ಷದಿಂದ ತತ್ತರಿಸಿರುವ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಉಖ್ರುಲ್ ಜಿಲ್ಲೆಯಲ್ಲಿ ಶಂಕಿತ ಉಗ್ರರು ಎರಡು ಕಾರುಗಳ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಶುಕ್ರವಾರ ಇಂಫಾಲ್–ಉಖ್ರುಲ್ ರಸ್ತೆಯ ನ್ಯೂ ಹೆವೆನ್ ಪ್ರದೇಶದಲ್ಲಿ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಎರಡು ವಾಹನಗಳನ್ನು ಗುರಿಯಾಗಿಸಿಕೊಂಡು ಗುಂಡಿನ ಮಳೆಗರೆದಿದ್ದಾರೆ. ಕಾರುಗಳಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎರಡೂ ವಾಹನಗಳ ಮುಂಭಾಗದ ಗಾಜುಗಳಲ್ಲಿ ಗುಂಡಿನ ಗುರುತುಗಳು ಪತ್ತೆಯಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೂ ಒಂದು ದಿನ ಮೊದಲು ಕಾಂಗ್‌ಪೋಕ್‌ಪಿ ಜಿಲ್ಲೆಯ ತಾಫೌ ಕುಕಿ ಗ್ರಾಮದ ಸಮೀಪ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 42 ವರ್ಷದ ಕುಕಿ ಸಮುದಾಯದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಇಬ್ಬರು ಪುರುಷರು ಗಾಯಗೊಂಡಿದ್ದರು. ನೆರೆಯ ಸೇನಾಪತಿ ಜಿಲ್ಲೆಯ ಕೈಲೆಂಜಾಂಗ್ ಪ್ರದೇಶದಲ್ಲಿಯೂ ಗುಂಡಿನ ಚಕಮಕಿ ನಡೆದಿತ್ತು.
ಮಣಿಪುರದಲ್ಲಿ 2023ರ ಮೇ ತಿಂಗಳಿನಿಂದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ನಡೆಯುತ್ತಿರುವ ಜನಾಂಗೀಯ ಸಂಘರ್ಷದಲ್ಲಿ ಇದುವರೆಗೆ ಕನಿಷ್ಠ 306 ಮಂದಿ ಮೃತಪಟ್ಟಿದ್ದು, 49 ಮಂದಿ ನಾಪತ್ತೆಯಾಗಿದ್ದಾರೆ. ಸಾವಿರಾರು ಜನರು ಮನೆಮಠ ಕಳೆದುಕೊಂಡಿದ್ದಾರೆ.
ಈ ವರ್ಷದ ಫೆಬ್ರವರಿಯಿಂದ ಗುಡ್ಡಗಾಡು ಜಿಲ್ಲೆಗಳಲ್ಲಿ ಕುಕಿ ಮತ್ತು ನಾಗಾ ಸಮುದಾಯಗಳ ನಡುವಿನ ಸಂಘರ್ಷದಲ್ಲಿಯೂ ಕನಿಷ್ಠ 50 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನಿರಂತರ ಹಿಂಸಾಚಾರದಿಂದ ಮಣಿಪುರದಲ್ಲಿ ನಾಗರಿಕರ ಸುರಕ್ಷತೆಯ ಬಗ್ಗೆ ಆತಂಕ ಹೆಚ್ಚಾಗಿದೆ.