ಮುಂಬೈ, ಅ. 16: ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕುವ ಹಾಗೂ ನಿರಪರಾಧಿಗಳನ್ನು ಶಿಕ್ಷಿಸುವ ಸರ್ಕಾರ ಅಂತಿಮವಾಗಿ ಗೆಲ್ಲಲು ಸಾಧ್ಯವಿಲ್ಲ ಎಂದು ನಟಿ ಲೇಖಾ ವಾಷಿಂಗ್ಟನ್ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಲಿವುಡ್ ನಟ ಇಮ್ರಾನ ಖಾನ್ ಅವರ ಸಂಗಾತಿಯಾಗಿರುವ ಲೇಖಾ, ಇನ್ಸ್ಟಾಗ್ರಾಮ್ನಲ್ಲಿ ಅವರೊಂದಿಗೆ ಇರುವ ಚಿತ್ರ ಹಂಚಿಕೊಂಡು, ಇಮ್ರಾನ್ಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಭಾರತದಲ್ಲಿ ತಮ್ಮ ಸ್ನೇಹಿತ ಇಮ್ರಾನ ಖಾನ್ ಅವರನ್ನು ಅಕ್ರಮ ಹಾಗೂ ಅನೈತಿಕವಾಗಿ ಗುರಿಯಾಗಿಸಲಾಗುತ್ತಿದೆ ಎಂದು ಆರೋಪಿಸಿರುವ ಅವರು, ಇಮ್ರಾನ್ ಅವರ ಧ್ವನಿಯನ್ನು ಎಲ್ಲೆಡೆ ತಲುಪಿಸಲು ಸಹಕರಿಸುವಂತೆ ಮನವಿ ಮಾಡಿದ್ದಾರೆ.
ಬಲಪ್ರಯೋಗದ ಮೂಲಕ ಆಡಳಿತ ನಡೆಸುವ, ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕುವ ಮತ್ತು ನಿರಪರಾಧಿಗಳನ್ನು ಶಿಕ್ಷಿಸುವ ಸರ್ಕಾರ ಅಂತಿಮವಾಗಿ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು ಎಂದು ಲೇಖಾ ತಮ್ಮ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಅಮೆರಿಕದ ಪ್ರಜೆಯಾಗಿರುವ ಇಮ್ರಾನ ಖಾನ್, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯಲ್ಲಿ 13 ಕೋಟಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ ಎಂಬ ಆರೋಪದ ವಿರುದ್ಧ ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ ಅವರ ರಾಜೀನಾಮೆಗೆ ಪ್ರತಿಭಟನಾಕಾರರು ಆಗ್ರಹಿಸಿದ್ದರು.
ವಿದೇಶಿ ಪ್ರಜೆಯಾಗಿರುವ ಇಮ್ರಾನ್ ರಾಜಕೀಯ ಪ್ರತಿಭಟನೆಯಲ್ಲಿ ಭಾಗವಹಿಸಿರುವುದನ್ನು ಪ್ರಶ್ನಿಸಿ ಬಿಜೆಪಿ ನಾಯಕ ಕಿರಿಟ್ ಸೋಮಯ್ಯ ದೂರು ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಅಕ್ಟೋಬರ್ 28ರೊಳಗೆ ಭಾರತ ತೊರೆಯುವಂತೆ ಇಮ್ರಾನ ಖಾನ್ ಅವರಿಗೆ ಆದೇಶ ನೀಡಲಾಗಿದೆ ಎಂದು ವರದಿಯಾಗಿದೆ.