LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
Local News

ಅ. 25ರಂದು ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಮ್ಯಾರಥಾನ್

ಬೆಳಗಾವಿ, ಅ. 16 (ಸಮದರ್ಶಿ ಸುದ್ದಿ): ರಾಜ್ಯ ಸರ್ಕಾರದ 2026-27ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ ‘ಸಶಕ್ತ ಕರ್ನಾಟಕ’ ಕಾರ್ಯಕ್ರಮದಡಿ ಅಕ್ಟೋಬರ್ 25ರಂದು ಬೆಳಗಾವಿಯಲ್ಲಿ ರಾಷ್ಟ್ರಮಟ್ಟದ ಮ್ಯಾರಥಾನ್ ಆಯೋಜಿಸಲಾಗಿದ್ದು, ಕ್ರೀಡಾಪಟುಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕರೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬೆಳಗಾವಿ, ಹಂಪಿ, ಮುರುಡೇಶ್ವರ ಮತ್ತು ಚಿತ್ರದುರ್ಗದಲ್ಲಿ ರಾಷ್ಟ್ರಮಟ್ಟದ ಮ್ಯಾರಥಾನ್‌ಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಬೆಂಗಳೂರಿನ ಜೆ.ಜೆ. ಆಕ್ಟಿವ್ ಸಂಸ್ಥೆಯ ಸಹಭಾಗಿತ್ವದೊಂದಿಗೆ ಮ್ಯಾರಥಾನ್ ನಡೆಯಲಿದೆ.

5, 10 ಮತ್ತು 21 ಕಿ.ಮೀ. ಓಟ: ಬೆಳಗಾವಿಯ ಸುವರ್ಣ ವಿಧಾನಸೌಧದ ಮುಂಭಾಗದಿಂದ ಮ್ಯಾರಥಾನ್ ಆರಂಭವಾಗಲಿದ್ದು, ನಗರದ ಕೋಟೆ ಕೆರೆ ಮಾರ್ಗವಾಗಿ ಸಾಗುವ ಓಟ ಮತ್ತೆ ಸುವರ್ಣಸೌಧದ ಮುಂಭಾಗದಲ್ಲಿ ಮುಕ್ತಾಯಗೊಳ್ಳಲಿದೆ. 5 ಕಿ.ಮೀ., 10 ಕಿ.ಮೀ. ಹಾಗೂ 21 ಕಿ.ಮೀ. ಹಾಫ್ ಮ್ಯಾರಥಾನ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಭಾಗವಹಿಸುವ ಎಲ್ಲ ಕ್ರೀಡಾಪಟುಗಳಿಗೆ ಟಿ-ಶರ್ಟ್, ಪದಕ ಹಾಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿದೆ.

ವಿಜೇತರಿಗೆ ನಗದು ಬಹುಮಾನ: 21 ಕಿ.ಮೀ. ಹಾಫ್ ಮ್ಯಾರಥಾನ್‌ನ 18ರಿಂದ 45 ವರ್ಷದೊಳಗಿನವರ ವಿಭಾಗದಲ್ಲಿ ಪ್ರಥಮ ಬಹುಮಾನ ₹7,500, ದ್ವಿತೀಯ ₹5,000 ಹಾಗೂ ತೃತೀಯ ₹3,000 ನೀಡಲಾಗುವುದು. 45 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಕ್ರಮವಾಗಿ ₹5,000, ₹3,500 ಹಾಗೂ ₹2,500 ಬಹುಮಾನ ನೀಡಲಾಗುವುದು.

10 ಕಿ.ಮೀ. ಮ್ಯಾರಥಾನ್‌ನ 18ರಿಂದ 45 ವರ್ಷದೊಳಗಿನವರ ವಿಭಾಗದಲ್ಲಿ ಪ್ರಥಮ ₹5,000, ದ್ವಿತೀಯ ₹3,500 ಹಾಗೂ ತೃತೀಯ ₹2,500 ಬಹುಮಾನ ನಿಗದಿಪಡಿಸಲಾಗಿದೆ. 45 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಕ್ರಮವಾಗಿ ₹3,000, ₹2,000 ಹಾಗೂ ₹1,500 ನೀಡಲಾಗುವುದು. ವಿಜೇತರಿಗೆ ಟ್ರೋಫಿಗಳನ್ನೂ ವಿತರಿಸಲಾಗುವುದು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಬಹುಮಾನ ನೀಡಲಾಗುವುದು.

ನೋಂದಣಿಗೆ ಅವಕಾಶ: ಮ್ಯಾರಥಾನ್‌ನಲ್ಲಿ ಭಾಗವಹಿಸಲು 5 ಕಿ.ಮೀ. ಓಟಕ್ಕೆ ₹350, 10 ಕಿ.ಮೀ.ಗೆ ₹600 ಹಾಗೂ 21 ಕಿ.ಮೀ.ಗೆ ₹800 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರಿಗೆ ಪ್ರವೇಶ ಶುಲ್ಕದಲ್ಲಿ ಶೇ. 25ರಷ್ಟು ರಿಯಾಯಿತಿ ನೀಡಲಾಗುವುದು.

ಆಸಕ್ತರು ಆನ್‌ಲೈನ್ ನೋಂದಣಿ ಪೋರ್ಟಲ್ ಮೂಲಕ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.

ಕ್ರೀಡಾಪಟುಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮ್ಯಾರಥಾನ್ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಜೆ.ಜೆ. ಆಕ್ಟಿವ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಮೋದ ದೇಶಪಾಂಡೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಬಿ. ಶ್ರೀನಿವಾಸ ಉಪಸ್ಥಿತರಿದ್ದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST