ಬೆಳಗಾವಿ, ಅ. 15 (ಸಮದರ್ಶಿ ಸುದ್ದಿ): ಕಬ್ಬಿಗೆ ಬೆಂಬಲ ಬೆಲೆ ಹೆಚ್ಚಿಸುವಂತೆ ಆಗ್ರಹಿಸಿ ಮಂಗಳವಾರದಿಂದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ರೈತರು ನಡೆಸುತ್ತಿದ್ದ ಅಹೋರಾತ್ರಿ ರಸ್ತೆ ತಡೆ ಪ್ರತಿಭಟನೆ ಗುರುವಾರ ಮುಂಜಾನೆ ಅಂತ್ಯಗೊಂಡಿದೆ. ಇದರೊಂದಿಗೆ 2 ದಿನಗಳಿಂದ ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ವಾಹನ ಸಂಚಾರ ಪುನರಾರಂಭಗೊಂಡಿದೆ. ಮತ್ತೊಂದೆಡೆ, ರೈತರು ಹತ್ತರಗಿಯಿಂದ ಹುಬ್ಬಳ್ಳಿಗೆ ಪಾದಯಾತ್ರೆ ಆರಂಭಿಸುವ ಮೂಲಕ ಹೋರಾಟ ಮುಂದುವರಿಸಿದ್ದಾರೆ.
ಕಬ್ಬಿನ ದರ ನಿಗದಿ ಕುರಿತು ಸೋಮವಾರ ದೆಹಲಿಯಲ್ಲಿ ಕೇಂದ್ರ ಸರಕಾರದೊಂದಿಗೆ ನಡೆದ ಮಾತುಕತೆ ವಿಫಲಗೊಂಡ ಹಿನ್ನೆಲೆಯಲ್ಲಿ ಮಂಗಳವಾರದಿಂದ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್ಪೋಸ್ಟ್, ಹುಕ್ಕೇರಿ ತಾಲೂಕಿನ ಹತ್ತರಗಿ ಹಾಗೂ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ಪ್ಲಾಜಾಗಳ ಬಳಿ ಸಾವಿರಾರು ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನಾಕಾರರು ಟ್ರ್ಯಾಕ್ಟರ್ಗಳು ಹಾಗೂ ಎತ್ತಿನ ಬಂಡಿಗಳನ್ನು ಹೆದ್ದಾರಿಯಲ್ಲಿ ನಿಲ್ಲಿಸಿ ವಾಹನ ಸಂಚಾರಕ್ಕೆ ತಡೆಯೊಡ್ಡಿದ್ದರು. ಮಂಗಳವಾರ ಮತ್ತು ಬುಧವಾರ 2 ರಾತ್ರಿ ಹೆದ್ದಾರಿಯಲ್ಲೇ ಕಳೆದ ರೈತರಿಗೆ ಸ್ಥಳದಲ್ಲಿಯೇ ಅಡುಗೆ ಸಿದ್ಧಪಡಿಸಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಹೋರಾತ್ರಿ ಧರಣಿಯಿಂದಾಗಿ ನಿಪ್ಪಾಣಿಯಿಂದ ಕಿತ್ತೂರುವರೆಗೆ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದರು.
ಹುಬ್ಬಳ್ಳಿಯತ್ತ ರೈತರ ಪಾದಯಾತ್ರೆ: ರಸ್ತೆ ತಡೆ ಹೋರಾಟ ಹಿಂಪಡೆದ ಬೆನ್ನಲ್ಲೇ ರೈತರು ಹತ್ತರಗಿ ಟೋಲ್ಪ್ಲಾಜಾದಿಂದ ಹುಬ್ಬಳ್ಳಿಯತ್ತ ಪಾದಯಾತ್ರೆ ಆರಂಭಿಸಿದ್ದಾರೆ. ಹಿರೇಬಾಗೇವಾಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರೂ ಪಾದಯಾತ್ರೆಯಲ್ಲಿ ಸೇರಿಕೊಳ್ಳಲಿದ್ದು, ಶುಕ್ರವಾರ ಹುಬ್ಬಳ್ಳಿ ತಲುಪುವ ನಿರೀಕ್ಷೆಯಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನಪ್ಪ ಪೂಜೇರಿ ತಿಳಿಸಿದ್ದಾರೆ. ಹತ್ತರಗಿಯಲ್ಲಿ ನಡೆದ ಅಹೋರಾತ್ರಿ ಪ್ರತಿಭಟನೆಯ ನೇತೃತ್ವವನ್ನೂ ಪೂಜೇರಿ ವಹಿಸಿದ್ದರು.
ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ: ರೈತರ ರಸ್ತೆ ತಡೆಯಿಂದ ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡಚಣೆಯಾಗಿದ್ದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರೊಂದಿಗೆ ಪೊಲೀಸರು ಮಾತುಕತೆ ನಡೆಸಿದ್ದರು. ಸಾರ್ವಜನಿಕರ ಹಿತದೃಷ್ಟಿಯಿಂದ ಹೆದ್ದಾರಿ ತೆರವುಗೊಳಿಸುವಂತೆ ಮಾಡಿದ ಮನವಿಗೆ ರೈತರು ಸ್ಪಂದಿಸಿದ್ದು, ಗುರುವಾರ ಮುಂಜಾನೆಯಿಂದ ವಾಹನ ಸಂಚಾರ ಪುನರಾರಂಭಗೊಂಡಿದೆ ಎಂದು ಬೆಳಗಾವಿ ಎಸಿಪಿ ನಾರಾಯಣ ಬರಮನಿ ತಿಳಿಸಿದ್ದಾರೆ.
ಹುಬ್ಬಳ್ಳಿಯತ್ತ ಸಾಗುತ್ತಿರುವ ರೈತರ ಪಾದಯಾತ್ರೆಗೆ ಹೆದ್ದಾರಿಯ ಒಂದು ಬದಿಯನ್ನು ಮೀಸಲಿಡಲಾಗಿದೆ. ವಾಹನಗಳ ಸಂಚಾರಕ್ಕಾಗಿ ಮತ್ತೊಂದು ಬದಿಯ ರಸ್ತೆಯಲ್ಲಿ ಎರಡೂ ದಿಕ್ಕಿನ ವಾಹನಗಳು ಸಂಚರಿಸುವಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.