ಬೆಂಗಳೂರು, ಅ. 15 (ಸಮದರ್ಶಿ ಸುದ್ದಿ): ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬೆಂಗಳೂರಿನ ರಿಂಗ್ ರೋಡ್ ಗಿರೀಶ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಶುಭಾ ಶಂಕರನಾರಾಯಣ ಹಾಗೂ ಆಕೆಯ ಪ್ರಿಯಕರ ಅರುಣ್ ವರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಜ್ಯ ಸಚಿವ ಸಂಪುಟ ತಿರಸ್ಕರಿಸಿದೆ.
ಗುರುವಾರ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಕೋರಿ ರಾಜ್ಯಪಾಲರಿಗೆ ಸಲ್ಲಿಸಿದ್ದ ಅರ್ಜಿಯ ಕುರಿತು ಚರ್ಚಿಸಲಾಯಿತು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಸಚಿವ ಸಂಪುಟ, ಕ್ಷಮಾದಾನಕ್ಕೆ ಶಿಫಾರಸು ಮಾಡದಿರಲು ನಿರ್ಧರಿಸಿದೆ.
ಏನಿದು ಪ್ರಕರಣ?
2003ರಲ್ಲಿ ಬೆಂಗಳೂರಿನಲ್ಲಿ ನಡೆದ ಗಿರೀಶ್ ಕೊಲೆ ಪ್ರಕರಣ ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತ್ತು. ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ಗಿರೀಶ್ ಹಾಗೂ ಕಾನೂನು ವಿದ್ಯಾರ್ಥಿನಿ ಶುಭಾ ಅವರ ವಿವಾಹ ನಿಶ್ಚಯವಾಗಿ, ನವೆಂಬರ್ 30ರಂದು ನಿಶ್ಚಿತಾರ್ಥ ನಡೆದಿತ್ತು. ಆದರೆ, ಶುಭಾ ತನ್ನ ಕಾಲೇಜಿನ ಕಿರಿಯ ವಿದ್ಯಾರ್ಥಿ ಅರುಣ್ ವರ್ಮಾನನ್ನು ಪ್ರೀತಿಸುತ್ತಿದ್ದಳು.
ಅರುಣ್ನನ್ನು ವಿವಾಹವಾಗುವ ಉದ್ದೇಶದಿಂದ ಗಿರೀಶ್ ಹತ್ಯೆಗೆ ಶುಭಾ ಸಂಚು ರೂಪಿಸಿದ್ದಳು ಎಂಬುದು ತನಿಖೆಯಲ್ಲಿ ಬಹಿರಂಗವಾಗಿತ್ತು. ಡಿಸೆಂಬರ್ 3ರ ರಾತ್ರಿ ಗಿರೀಶ್ ತನ್ನ ಭಾವಿ ಪತ್ನಿಯನ್ನು ಊಟಕ್ಕೆ ಕರೆದುಕೊಂಡು ಹೋಗಿದ್ದರು. ಬಳಿಕ ವಿಮಾನಗಳ ಹಾರಾಟ ವೀಕ್ಷಿಸುವ ನೆಪದಲ್ಲಿ ಶುಭಾ ಅವರನ್ನು ಎಚ್ಎಎಲ್ ವಿಮಾನ ನಿಲ್ದಾಣದ ಸಮೀಪದ ರಿಂಗ್ ರೋಡ್ಗೆ ಕರೆದೊಯ್ದಿದ್ದಳು.
ಅಲ್ಲಿ ಮೊದಲೇ ಸಂಚು ರೂಪಿಸಿದ್ದ ಆರೋಪಿಗಳು ಗಿರೀಶ್ ತಲೆಗೆ ಬೈಕ್ನ ಶಾಕ್ ಅಬ್ಸಾರ್ಬರ್ನಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಅಂದಿನ ವಿವೇಕನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕೆ.ಎ. ನಾನಯ್ಯ ತನಿಖೆ ನಡೆಸಿ, ಮೊಬೈಲ್ ಕರೆಗಳ ದಾಖಲೆಗಳ ಆಧಾರದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿದ್ದರು.
2010ರ ಜುಲೈನಲ್ಲಿ ವಿಚಾರಣಾ ನ್ಯಾಯಾಲಯ ಶುಭಾ ಸೇರಿದಂತೆ ನಾಲ್ವರನ್ನು ದೋಷಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕರ್ನಾಟಕ ಹೈಕೋರ್ಟ ಕೂಡ ಶಿಕ್ಷೆಯನ್ನು ಎತ್ತಿಹಿಡಿದಿತ್ತು.
2012ರಲ್ಲಿ ಶುಭಾ ಸುಪ್ರೀಂ ಕೋರ್ಟ ಮೊರೆಹೋಗಿ ಜಾಮೀನು ಪಡೆದಿದ್ದಳು. ನಂತರ ಇತರ ಆರೋಪಿಗಳೂ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆದರೆ, 2025ರ ಜುಲೈ 14ರಂದು ಸುಪ್ರೀಂ ಕೋರ್ಟ ನಾಲ್ವರ ಜೀವಾವಧಿ ಶಿಕ್ಷೆಯನ್ನು ಖಾಯಂಗೊಳಿಸಿತ್ತು.
ಇದೀಗ ಸನ್ನಡತೆ ಆಧಾರದಲ್ಲಿ ಅವಧಿಪೂರ್ವ ಬಿಡುಗಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಸಚಿವ ಸಂಪುಟ ತಿರಸ್ಕರಿಸಿರುವುದರಿಂದ ಶುಭಾ ಹಾಗೂ ಅರುಣ್ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ.