ಮಂಡ್ಯ, ಅ. 9 (ಸಮದರ್ಶಿ ಸುದ್ದಿ): ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಮುಖ ಸಚಿವರನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ನಡೆಸಲು ದೆಹಲಿ ಮೂಲದ ಖಾಸಗಿ ಏಜೆನ್ಸಿಗೆ ಸುಪಾರಿ ನೀಡಲಾಗಿದೆ. ಇದರ ಹಿಂದೆ ಕೇಂದ್ರ ಸಚಿವರೊಬ್ಬರು ಹಾಗೂ ರಾಜ್ಯದ ಬಿಜೆಪಿ ನಾಯಕರೊಬ್ಬರ ಕೈವಾಡವಿದೆ ಎಂದು ಶಾಸಕ ಪಿ. ರವಿಕುಮಾರ್ (ಗಣಿಗ) ಗಂಭೀರ ಆರೋಪ ಮಾಡಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ಫೋಟೊ, ಆಡಿಯೊ, ವಿಡಿಯೊ ಹಾಗೂ ಸಿಸಿಟಿವಿ ದೃಶ್ಯಾವಳಿಗಳಿರುವ ಪೆನ್‌ಡ್ರೈವ್ ಪ್ರದರ್ಶಿಸಿದರು. ಮುಂದಿನ ಒಂದು ವಾರದೊಳಗೆ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಪ್ರಭಾವ ಕುಗ್ಗಿಸಲು ಹಾಗೂ ಸರ್ಕಾರಕ್ಕೆ ಮುಜುಗರ ಉಂಟುಮಾಡಲು 10 ಪ್ರಮುಖ ಸಚಿವರನ್ನು ಗುರಿಯಾಗಿಸಿಕೊಳ್ಳಲಾಗಿದೆ. ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ಏಜೆನ್ಸಿ ಸಿಬ್ಬಂದಿಗೆ ವಾಸ್ತವ್ಯ ಕಲ್ಪಿಸಿ, ಹಣ ಪಾವತಿಸಲಾಗಿದೆ ಎಂದು ಆರೋಪಿಸಿದರು.
ಏಜೆನ್ಸಿಗೆ ಪಾವತಿಸಿದ ಹಣ, ಸಂಪರ್ಕಿಸಿದ ಸಚಿವರು ಹಾಗೂ ರಾಜಕೀಯ ನಾಯಕರ ಆಪ್ತ ಸಹಾಯಕರ ಪಾತ್ರದ ಕುರಿತು ದಾಖಲೆಗಳಿವೆ. ಒಂದು ವಾರದೊಳಗೆ ದೂರು ಸಲ್ಲಿಸಿ, ಸಾಕ್ಷ್ಯಗಳನ್ನು ತನಿಖಾಧಿಕಾರಿಗಳಿಗೆ ಒಪ್ಪಿಸುವುದಾಗಿ ಹೇಳಿದರು.
ರಮೇಶ ಜಾರಕಿಹೊಳಿ ಪ್ರಕರಣ ಸೇರಿದಂತೆ ಹಿಂದಿನ ಸಿ.ಡಿ. ಪ್ರಕರಣಗಳ ಹಿಂದೆ ಬಿಜೆಪಿ ನಾಯಕರ ಹಣಕಾಸಿನ ನೆರವಿದೆ ಎಂದು ಆರೋಪಿಸಿದರು. ಮುಡಾ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣ ಅವರಿಗೆ ದಾಖಲೆ ಒದಗಿಸಿದವರ ಮಾಹಿತಿ ತಮ್ಮಲ್ಲಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನಗಳು ವಿಫಲವಾಗಿವೆ ಎಂದು ಹೇಳಿದರು.