ಬೆಳಗಾವಿ, ಅ. 15 (ಸಮದರ್ಶಿ ಸುದ್ದಿ): ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದ ಶ್ರೀ ಭಿಷ್ಟಾದೇವಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಪ್ರಾಣಿಬಲಿ ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಆದೇಶ ಹೊರಡಿಸಿದ್ದಾರೆ.
ಅಕ್ಟೋಬರ್ 19ರಿಂದ 21ರವರೆಗೆ ನಡೆಯಲಿರುವ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ರೀತಿಯ ಪ್ರಾಣಿಬಲಿ ನಡೆಸದಂತೆ ನಿಷೇಧ ಹೇರಲಾಗಿದೆ.
ಕರ್ನಾಟಕ ಪ್ರಾಣಿಬಲಿ ನಿಷೇಧ ಕಾಯ್ದೆ 1959, ನಿಯಮಗಳು 1963 ಹಾಗೂ ತಿದ್ದುಪಡಿ ಕಾಯ್ದೆ 1975ರ ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
ಜಾತ್ರೆಯ ಸಂದರ್ಭದಲ್ಲಿ ಪ್ರಾಣಿಬಲಿ ನಡೆಯುವ ಸಾಧ್ಯತೆ ಇರುವುದರಿಂದ ಅದನ್ನು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದ್ದು, ಅಕ್ಟೋಬರ್ 19ರಿಂದ 21ರವರೆಗೆ ಜಾರಿಯಲ್ಲಿರಲಿದೆ.
ನಿಷೇಧಾಜ್ಞೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಪೊಲೀಸ್ ಇಲಾಖೆ, ತಾಲೂಕು ಆಡಳಿತ, ಪಶುಸಂಗೋಪನಾ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.
ಆದೇಶ ಉಲ್ಲಂಘಿಸಿ ಪ್ರಾಣಿಬಲಿ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.