LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
National News

ನ್ಯಾಯಾಂಗ ನಿಂದನೆ ಆರೋಪ: ಸಂಜಯ ರಾವತ್, ನಿಖಿಲ್ ವಾಘ್ಲೆಗೆ ನೋಟಿಸ್

ಹೊಸದಿಲ್ಲಿ, ಅ. 16: ಭಾರತದ ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯಾಂಗದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಶಿವಸೇನೆ (ಯುಬಿಟಿ) ರಾಜ್ಯಸಭಾ ಸದಸ್ಯ ಸಂಜಯ ರಾವತ್ ಮತ್ತು ಹಿರಿಯ ಪತ್ರಕರ್ತ ನಿಖಿಲ್ ವಾಘ್ಲೆ ಅವರಿಗೆ ಸುಪ್ರೀಂ ಕೋರ್ಟ ಶುಕ್ರವಾರ ಕಾರಣ ಕೇಳುವ ನೋಟಿಸ್ ಜಾರಿ ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ಇಬ್ಬರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವ ಕುರಿತು ವಿವರಣೆ ಕೇಳಿದೆ. ಮುಂದಿನ ವಿಚಾರಣೆಗೆ ಖುದ್ದು ಹಾಜರಾಗುವುದರಿಂದ ವಿನಾಯಿತಿ ನೀಡಿರುವ ನ್ಯಾಯಪೀಠ, ಅವರ ಉತ್ತರ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ನಿರ್ಧರಿಸುವುದಾಗಿ ತಿಳಿಸಿದೆ.

ಸುಪ್ರೀಂ ಕೋರ್ಟ ಬಾರ್ ಅಸೋಸಿಯೇಷನ್ (ಎಸ್‌ಸಿಬಿಎ) ಸಲ್ಲಿಸಿದ ಅರ್ಜಿಯ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಂಘದ ಅಧ್ಯಕ್ಷ ಹಾಗೂ ಹಿರಿಯ ವಕೀಲ ಪ್ರದೀಪ್ ರಾಯ್ ಅವರು, ರಾವತ್ ಮತ್ತು ವಾಘ್ಲೆ ಅವರ ಹೇಳಿಕೆಗಳು ನ್ಯಾಯಸಮ್ಮತ ಟೀಕೆಯ ಮಿತಿಯನ್ನು ಮೀರಿದ್ದು, ನ್ಯಾಯಾಂಗದ ಮೇಲಿನ ಸಾರ್ವಜನಿಕ ವಿಶ್ವಾಸಕ್ಕೆ ಧಕ್ಕೆ ತರುವಂತಿವೆ ಎಂದು ಆರೋಪಿಸಿದ್ದಾರೆ.

ವಿಚಾರಣೆ ವೇಳೆ ನ್ಯಾಯಾಂಗದ ವಿರುದ್ಧದ ಹೇಳಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ, ನ್ಯಾಯಾಲಯಗಳು ನಾಗರಿಕರ ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಮೂಲಭೂತ ಹಕ್ಕುಗಳ ರಕ್ಷಣೆಗೆ ನಿರಂತರವಾಗಿ ಶ್ರಮಿಸಿವೆ. ಇಂತಹ ಸಂದರ್ಭದಲ್ಲಿ ನ್ಯಾಯಾಂಗ ಸಂಸ್ಥೆಯನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುವುದು ದುರದೃಷ್ಟಕರ ಎಂದು ಅಭಿಪ್ರಾಯಪಟ್ಟರು.

ಇಬ್ಬರೂ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗುವಂತೆ ನಿರ್ದೇಶಿಸಬೇಕೆಂದು ಬಾರ್ ಅಸೋಸಿಯೇಷನ್ ಒತ್ತಾಯಿಸಿತು. ಆದರೆ, ಮೊದಲ ಹಂತದಲ್ಲಿ ಕಾರಣ ಕೇಳುವ ನೋಟಿಸ್ ನೀಡುವುದಷ್ಟೇ ಸೂಕ್ತವೆಂದು ನ್ಯಾಯಪೀಠ ನಿರ್ಧರಿಸಿತು.

ನ್ಯಾಯಾಂಗ ನಿಂದನೆ ಕಾಯಿದೆ–1971ರ ಸೆಕ್ಷನ್ 15(1)(ಬಿ) ಅಡಿಯಲ್ಲಿ ಕ್ರಮ ಆರಂಭಿಸಲು ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅಕ್ಟೋಬರ್ 15ರಂದು ಅನುಮತಿ ನೀಡಿದ್ದರು. ಅದೇ ದಿನ ಬಾರ್ ಅಸೋಸಿಯೇಷನ್ ಸುಪ್ರೀಂ ಕೋರ್ಟಗೆ ಅರ್ಜಿ ಸಲ್ಲಿಸಿತ್ತು.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ವಿವಾದದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ನಿಯೋಗವೊಂದು ಮುಖ್ಯ ನ್ಯಾಯಮೂರ್ತಿಯನ್ನು ಖುದ್ದಾಗಿ ಭೇಟಿಯಾಗಲು ಕೋರಿತ್ತು. ಆದರೆ, ತಮ್ಮ ಅಹವಾಲನ್ನು ಅರ್ಜಿಯ ಮೂಲಕ ನ್ಯಾಯಾಲಯದ ಮುಂದಿಡಬಹುದು ಎಂದು ತಿಳಿಸಿದ್ದ ಮುಖ್ಯ ನ್ಯಾಯಮೂರ್ತಿ, ಭೇಟಿಗೆ ಅವಕಾಶ ನಿರಾಕರಿಸಿದ್ದರು.

ಈ ಬೆಳವಣಿಗೆಯ ಬಳಿಕ ಪತ್ರಕರ್ತ ನಿಖಿಲ್ ವಾಘ್ಲೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮುಖ್ಯ ನ್ಯಾಯಮೂರ್ತಿಯನ್ನು ಉದ್ದೇಶಿಸಿ ಆಕ್ಷೇಪಾರ್ಹ ಎನ್ನಲಾದ ಹೇಳಿಕೆ ಪ್ರಕಟಿಸಿದ್ದರು. ಬಳಿಕ ಅದನ್ನು ಹಿಂಪಡೆದಿದ್ದಾರೆ ಎಂದು ವರದಿಯಾಗಿದೆ. ಸಂಜಯ್ ರಾವತ್ ಕೂಡ ನ್ಯಾಯಾಂಗದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂದು ಬಾರ್ ಅಸೋಸಿಯೇಷನ್ ತನ್ನ ಅರ್ಜಿಯಲ್ಲಿ ಆರೋಪಿಸಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST