ಬೆಂಗಳೂರು, ನ. 5: ರಾಜ್ಯ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ದೀಪಾವಳಿ ಸಂದರ್ಭದಲ್ಲಿ ಸರ್ಕಾರ ತುಟ್ಟಿಭತ್ಯೆ ಹೆಚ್ಚಳದ ಕೊಡುಗೆ ನೀಡಿದೆ. 2024ರ ಪರಿಷ್ಕೃತ ವೇತನ ಶ್ರೇಣಿಯಡಿ ವೇತನ ಪಡೆಯುತ್ತಿರುವ ನೌಕರರ ತುಟ್ಟಿಭತ್ಯೆಯನ್ನು ಶೇ.15.75ರಿಂದ ಶೇ.18ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಪರಿಷ್ಕೃತ ದರ ಜುಲೈ 1, 2026ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.
ಮೂಲವೇತನದ ಮೇಲೆ ನೀಡಲಾಗುವ ತುಟ್ಟಿಭತ್ಯೆಯಲ್ಲಿ ಶೇ.2.25 ಅಂಶಗಳ ಹೆಚ್ಚಳವಾಗಿದ್ದು, ₹50,000 ಮೂಲವೇತನ ಹೊಂದಿರುವ ನೌಕರರಿಗೆ ಮಾಸಿಕ ₹1,125 ಹೆಚ್ಚುವರಿ ದೊರೆಯಲಿದೆ.
ರಾಜ್ಯ ಸರ್ಕಾರದ ನಿವೃತ್ತ ನೌಕರರು, ಕುಟುಂಬ ಪಿಂಚಣಿದಾರರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಅರ್ಹ ನಿವೃತ್ತ ನೌಕರರಿಗೂ ಈ ಹೆಚ್ಚಳ ಅನ್ವಯವಾಗಲಿದೆ. ಇವರ ತುಟ್ಟಿಭತ್ಯೆಯನ್ನೂ ಶೇ.18ಕ್ಕೆ ಪರಿಷ್ಕರಿಸಲಾಗಿದೆ.
ಸರ್ಕಾರ ಮತ್ತು ಜಿಲ್ಲಾ ಪಂಚಾಯತ್‌ಗಳ ಪೂರ್ಣಾವಧಿ ನೌಕರರು, ವರ್ಕ್‌ಚಾರ್ಜ್ ನೌಕರರು, ಅನುದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳ ಅರ್ಹ ನೌಕರರು ಈ ಆದೇಶದ ವ್ಯಾಪ್ತಿಗೆ ಬರುತ್ತಾರೆ.
ವಿಶ್ವವಿದ್ಯಾಲಯ ಧನಸಹಾಯ ಆಯೋಗ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹಾಗೂ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ವೇತನ ಶ್ರೇಣಿಗಳಲ್ಲಿ ನಿವೃತ್ತರಾದ ರಾಜ್ಯ ಪಿಂಚಣಿದಾರರಿಗೂ ಹೆಚ್ಚಳ ಅನ್ವಯವಾಗಲಿದೆ. ಆದರೆ, ಈ ವೇತನ ಶ್ರೇಣಿಗಳಲ್ಲಿ ಸೇವೆಯಲ್ಲಿರುವ ನೌಕರರು ಹಾಗೂ ನ್ಯಾಯಾಂಗ ಅಧಿಕಾರಿಗಳಿಗೆ ಪ್ರತ್ಯೇಕ ಆದೇಶ ಹೊರಡಿಸಲಾಗುವುದು.
ಪರಿಷ್ಕೃತ ತುಟ್ಟಿಭತ್ಯೆಯನ್ನು ಮುಂದಿನ ಆದೇಶದವರೆಗೆ ನಗದಾಗಿ ಪಾವತಿಸುವಂತೆ ಸರ್ಕಾರ ಸೂಚಿಸಿದೆ.