ಬೆಂಗಳೂರು, ನ. 3: ರಾಜ್ಯದಲ್ಲಿ ತೀವ್ರ ಬರದಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ 22,400.58 ಕೋಟಿ ರೂ. ಬರ ಪರಿಹಾರವನ್ನು ತುರ್ತಾಗಿ ಬಿಡುಗಡೆ ಮಾಡುವಂತೆ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕ ಪತ್ರ ಬರೆದಿರುವ ಅವರು, ರಾಜ್ಯದ ಬರ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಲು ಭೇಟಿಗೆ ಸಮಯ ನೀಡುವಂತೆಯೂ ಮನವಿ ಮಾಡಿದ್ದಾರೆ.
ರಾಜ್ಯದ 226 ತಾಲೂಕುಗಳು ಬರಪೀಡಿತವಾಗಿದ್ದು, 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಿಂದ ಅಂದಾಜು 62,481.88 ಕೋಟಿ ರೂ. ಆರ್ಥಿಕ ನಷ್ಟ ಸಂಭವಿಸಿದೆ. ಲಕ್ಷಾಂತರ ರೈತ ಕುಟುಂಬಗಳು, ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರು ಜೀವನೋಪಾಯದ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಪರಿಷ್ಕೃತ ಪರಿಹಾರವೂ ಸಾಲದು: ಕೇಂದ್ರ ಸರ್ಕಾರ ಅಕ್ಟೋಬರ್ 26ರಂದು ರಾಜ್ಯ ಹಾಗೂ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿಗಳ ಪರಿಹಾರ ಮಾನದಂಡಗಳನ್ನು ಪರಿಷ್ಕರಿಸಿದೆ. ಇದರಿಂದ ರಾಜ್ಯದ ಬೆಳೆ ಹಾನಿ ಪರಿಹಾರದ ಅಗತ್ಯ 6,128.70 ಕೋಟಿ ರೂ.ಗಳಿಂದ 7,943.55 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಪರಿಣಾಮ ಒಟ್ಟು ಬರ ಪರಿಹಾರದ ಬೇಡಿಕೆ 20,585.73 ಕೋಟಿ ರೂ.ಗಳಿಂದ 22,400.58 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ.
ಪರಿಷ್ಕೃತ ಮಾನದಂಡಗಳ ಪ್ರಕಾರ ಮಳೆಯಾಶ್ರಿತ ಬೆಳೆಗಳಿಗೆ ಹೆಕ್ಟೇರ್ಗೆ 11,000 ರೂ., ನೀರಾವರಿ ಬೆಳೆಗಳಿಗೆ 22,000 ರೂ. ಹಾಗೂ ಬಹುವಾರ್ಷಿಕ ಬೆಳೆಗಳಿಗೆ 30,000 ರೂ. ಪರಿಹಾರ ನಿಗದಿಪಡಿಸಲಾಗಿದೆ. ಆದರೆ ಬೀಜ, ರಸಗೊಬ್ಬರ, ಕೂಲಿ ಹಾಗೂ ನೀರಾವರಿ ವೆಚ್ಚಗಳು ಗಣನೀಯವಾಗಿ ಹೆಚ್ಚಿರುವುದರಿಂದ ಈ ಮೊತ್ತ ರೈತರ ನೈಜ ನಷ್ಟ ಭರಿಸಲು ಸಾಕಾಗುವುದಿಲ್ಲ ಎಂದು ಪರಮೇಶ್ವರ ತಿಳಿಸಿದ್ದಾರೆ.
ಹಳೆಯ ದತ್ತಾಂಶಕ್ಕೆ ಆಕ್ಷೇಪ: ಪರಿಹಾರಕ್ಕೆ ಅರ್ಹ ರೈತರನ್ನು ಗುರುತಿಸಲು 2015–16ರ ಕೃಷಿ ಗಣತಿ ಮಾಹಿತಿಯನ್ನು ಬಳಸುತ್ತಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಳೆಯ ದಾಖಲೆಗಳ ಬದಲಿಗೆ ಕರ್ನಾಟಕ ಸರ್ಕಾರದ 'ಫ್ರೂಟ್ಸ್' ದತ್ತಾಂಶ ಬಳಸಬೇಕು. ಇದರಿಂದ ಅರ್ಹ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಪರಿಹಾರ ತಲುಪಿಸಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಹವಾಮಾನ ವೈಪರೀತ್ಯ, ಹೆಚ್ಚುತ್ತಿರುವ ಕೃಷಿ ವೆಚ್ಚ ಹಾಗೂ ರೈತರ ನೈಜ ನಷ್ಟವನ್ನು ಪರಿಗಣಿಸಿ ವಿಪತ್ತು ಪರಿಹಾರ ಮಾನದಂಡಗಳನ್ನು ಸಮಗ್ರವಾಗಿ ಮರುಪರಿಶೀಲಿಸಬೇಕು. ಪರಿಹಾರವು ಕೇವಲ ಸಾಂಕೇತಿಕ ನೆರವಾಗದೆ ರೈತರು ಮತ್ತೆ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ರಾಜ್ಯದ ಪರಿಷ್ಕೃತ ಮನವಿಯನ್ನು ತ್ವರಿತವಾಗಿ ಪರಿಶೀಲಿಸಿ, ನಿಯಮಾನುಸಾರ ಗರಿಷ್ಠ ಆರ್ಥಿಕ ನೆರವನ್ನು ಕೂಡಲೇ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.