ಹೊಸದಿಲ್ಲಿ, ನ. 3: ವಿರೋಧ ಪಕ್ಷಗಳನ್ನು ದೇಶದ್ರೋಹಿಗಳೆಂದು ಕರೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧೈರ್ಯವಿದ್ದರೆ ಒಂದೇ ವೇದಿಕೆಯಲ್ಲಿ ಮುಖಾಮುಖಿ ಬಹಿರಂಗ ಚರ್ಚೆಗೆ ಬರಲಿ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಸವಾಲು ಹಾಕಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಬಿಡುಗಡೆ ಮಾಡಿರುವ ಅವರು, ಪ್ರಧಾನಿಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿ 24 ಗಂಟೆಗಳು ಕಳೆದಿವೆ. ನಿಜವಾದ ದೇಶದ್ರೋಹಿಗಳು ಯಾರು? ವಿದೇಶಿ ಶಕ್ತಿಗಳೊಂದಿಗೆ ಯಾರಿಗೆ ಸಂಪರ್ಕವಿದೆ? ಆ ಸಂಪರ್ಕಗಳ ಸ್ವರೂಪವೇನು? ಎಂಬುದನ್ನು ದೇಶದ ಜನರ ಮುಂದೆ ಚರ್ಚಿಸೋಣ. ಪ್ರಧಾನಿ ಸೂಚಿಸುವ ಯಾವುದೇ ವೇದಿಕೆಗೆ ಬರಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ನಾವಿಬ್ಬರೂ ಒಂದೇ ಮೇಜಿನ ಎದುರು ಕುಳಿತು ಚರ್ಚಿಸೋಣ. ಮಾಧ್ಯಮ ಪ್ರತಿನಿಧಿಗಳು ಹಾಗೂ ದೇಶದ ಯುವಜನತೆಯೂ ಅಲ್ಲಿರಲಿ. ಚರ್ಚೆಗೆ ತೀರ್ಪುಗಾರರಾಗಿ ನಿಮಗೆ ಬೇಕಾದವರನ್ನು ನೇಮಿಸಿಕೊಳ್ಳಬಹುದು. ಅಗತ್ಯವಿದ್ದರೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಅವರನ್ನೇ ತೀರ್ಪುಗಾರರನ್ನಾಗಿ ಮಾಡಿಕೊಳ್ಳಿ ಎಂದು ಸವಾಲು ಹಾಕಿದ್ದಾರೆ.
ದೇಶದ ಆರ್ಥಿಕ ಪರಿಸ್ಥಿತಿ, ಆರ್ಥಿಕ ನೀತಿಗಳು, ಅಮೆರಿಕದೊಂದಿಗಿನ ಒಪ್ಪಂದ, ಸಂಪುಟದ ಗಮನಕ್ಕೆ ತರದೆ ನಿರ್ಧಾರ ಕೈಗೊಂಡಿರುವ ಆರೋಪ, ಅದಾನಿ ಪ್ರಕರಣ ಹಾಗೂ ಎಪ್‌ಸ್ಟೈನ್ ಕಡತಗಳು ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಮುಕ್ತ ಚರ್ಚೆ ನಡೆಯಲಿ. ದೇಶದ ಜನತೆಗೆ ಸತ್ಯ ತಿಳಿಯಬೇಕು ಎಂದು ರಾಹುಲ್ ಒತ್ತಾಯಿಸಿದ್ದಾರೆ.
ಅಮೆರಿಕದೊಂದಿಗೆ ಒಪ್ಪಂದವನ್ನು ಇಷ್ಟೊಂದು ತರಾತುರಿಯಲ್ಲಿ ಏಕೆ ಮಾಡಿಕೊಳ್ಳಲಾಯಿತು? ಸಂಪುಟದ ಸಹೋದ್ಯೋಗಿಗಳೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡಿದ್ದು ಏಕೆ? ಅದಾನಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದು ಏಕೆ? ಎಂಬ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ತಮ್ಮ ವಿರುದ್ಧ ಸುಮಾರು 45 ಮಾನಹಾನಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿರುವ ರಾಹುಲ್, ವಿದೇಶಿ ಶಕ್ತಿಗಳೊಂದಿಗಿನ ಸಂಪರ್ಕದ ಆರೋಪ ಹಾಗೂ ಬಹಿರಂಗ ಚರ್ಚೆಯ ಸವಾಲಿನ ವಿಚಾರದಲ್ಲಿ ಮಾತ್ರ ಯಾವುದೇ ಮಾನಹಾನಿ ಮೊಕದ್ದಮೆ ದಾಖಲಿಸಿಲ್ಲ. ಬೇಕಿದ್ದರೆ ಈಗಲೂ ಪ್ರಕರಣ ದಾಖಲಿಸಲಿ. ಆ ವಿಷಯವನ್ನೂ ಸಾರ್ವಜನಿಕವಾಗಿ ಚರ್ಚಿಸಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಪರಸ್ಪರ ಆರೋಪಗಳನ್ನು ಮಾಡುವುದಕ್ಕಿಂತ ದೇಶದ ಜನರ ಎದುರು ಕುಳಿತು ಸತ್ಯಾಸತ್ಯತೆಗಳನ್ನು ಸ್ಪಷ್ಟಪಡಿಸುವುದು ಉತ್ತಮ. ಹಾಲು ಮತ್ತು ನೀರನ್ನು ಬೇರ್ಪಡಿಸಿದಂತೆ ಸತ್ಯ ಹೊರಬರಲಿ. ಪ್ರಧಾನಿ ಚರ್ಚೆಯಿಂದ ಹಿಂದೆ ಸರಿಯಬಾರದು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ವಿಡಿಯೊದ ಕೊನೆಯಲ್ಲಿ ಕೈಯಲ್ಲಿ ಗುಲಾಬಿ ಹೂ ಹಿಡಿದಿದ್ದ ರಾಹುಲ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದ್ದಾರೆ.