LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
State News | Districts Dharwad

ನವಲಗುಂದ ಬಳಿ ಭೀಕರ ಅಪಘಾತ: ಕಾರು–ಕ್ಯಾಂಟರ್ ಡಿಕ್ಕಿಗೆ ನಾಲ್ವರ ಬಲಿ

ಧಾರವಾಡ, ಅ. 9 (ಸಮದರ್ಶಿ ಸುದ್ದಿ): ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಮರಗೋಳ ಗ್ರಾಮದ ಸಮೀಪ ಶುಕ್ರವಾರ ಬೆಳಿಗ್ಗೆ ಸ್ವಿಫ್ಟ್ ಕಾರು ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಮಹಿಳೆ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ವಿಜಯಪುರ ಮೂಲದ ಅಜಿತ್ (32), ರಾಕೇಶ್ (22), ಸಂದೀಪ್ (33) ಹಾಗೂ ಸಿದ್ದಾಪುರದ ಶೃತಿ (28) ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯಿಂದ ವಿಜಯಪುರದತ್ತ ತೆರಳುತ್ತಿದ್ದ ಕಾರಿಗೆ ಎದುರಿನಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆ ನವಲಗುಂದ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ನವಲಗುಂದ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನೆಂಬುದರ ಕುರಿತು ತನಿಖೆ ನಡೆಯುತ್ತಿದೆ.

ಮೃತ ರಾಕೇಶ್ ಮತ್ತು ಸಂದೀಪ್ ಅವರ ದೊಡ್ಡಪ್ಪ ಸುಖದೇವ್ ಬೋಸ್ಲೆ ಮಾತನಾಡಿ, ಬ್ಯಾಂಕ್ ಕೆಲಸವಿದೆ ಎಂದು ಹೇಳಿ ಇಬ್ಬರೂ ಮನೆಯಿಂದ ತೆರಳಿದ್ದರು. ಆದರೆ, ಎಲ್ಲಿಗೆ ಹೋಗುತ್ತಿರುವುದಾಗಿ ತಿಳಿಸಿರಲಿಲ್ಲ. ಅಪಘಾತದಲ್ಲಿ ಮೃತಪಟ್ಟಿರುವ ವಿಷಯವನ್ನು ಪೊಲೀಸರು ತಿಳಿಸಿದ ಬಳಿಕವೇ ಕುಟುಂಬಕ್ಕೆ ದುರಂತದ ಮಾಹಿತಿ ಗೊತ್ತಾಯಿತು ಎಂದು ಕಣ್ಣೀರಿಟ್ಟರು.

ರಾಕೇಶ್ ಇಂಡಿಯ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬಕ್ಕೆ ಆರ್ಥಿಕ ಆಧಾರವಾಗಿದ್ದ. ಶೀಘ್ರದಲ್ಲೇ ಆತನ ಮದುವೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಅನಿರೀಕ್ಷಿತ ದುರಂತದಿಂದ ಕುಟುಂಬ ಕಂಗಾಲಾಗಿದೆ ಎಂದು ಸುಖದೇವ್ ನೋವು ತೋಡಿಕೊಂಡರು.

ಮೃತ ಅಜಿತ್ ಅವರ ತಾಯಿ ರೇಣುಕಾ ಮಾತನಾಡಿ, ಸಂಬಂಧಿಕರು ಕೊಡಿಸಿದ್ದ ಕಾರನ್ನು ಬಾಡಿಗೆಗೆ ಓಡಿಸಿಕೊಂಡು ಮಗ ಕುಟುಂಬವನ್ನು ಸಾಕುತ್ತಿದ್ದ. ವಿಜಯಪುರದಿಂದ ಶಿವಮೊಗ್ಗಕ್ಕೆ ಬಾಡಿಗೆಗೆ ತೆರಳಿದ್ದ ಎಂದು ತಿಳಿಸಿದರು.

ಬೆಳಿಗ್ಗೆ ಸುಮಾರು 5 ಗಂಟೆಗೆ ಮಗನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೆ. ಹುಬ್ಬಳ್ಳಿ ದಾಟಿ ಬರುತ್ತಿರುವುದಾಗಿ ಹೇಳಿದ್ದ. ನಿಧಾನವಾಗಿ, ಎಚ್ಚರಿಕೆಯಿಂದ ಬರುವಂತೆ ತಿಳಿಸಿದ್ದೆ. ಆದರೆ, ಕೆಲವೇ ಹೊತ್ತಿನಲ್ಲಿ ಪೊಲೀಸರು ಕರೆ ಮಾಡಿ ಅಪಘಾತದ ವಿಷಯ ತಿಳಿಸಿದರು ಎಂದು ರೇಣುಕಾ ಕಣ್ಣೀರಿಟ್ಟರು.

ಕುಟುಂಬದ ಜೀವನಾಧಾರವಾಗಿದ್ದವರನ್ನು ಕಳೆದುಕೊಂಡು ಮೃತರ ಸಂಬಂಧಿಕರು ಆಕ್ರಂದನ ವ್ಯಕ್ತಪಡಿಸಿದ್ದಾರೆ. ಅಪಘಾತದ ಕುರಿತು ನವಲಗುಂದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೆಹಲಿ ಪ್ರತಿಭಟನೆಗೆ ತೆರಳದಂತೆ ಮಹಾರಾಷ್ಟ್ರ ಪೊಲೀಸರ ನೋಟಿಸ್ಸ್ಟಿಂಗ್‌ ಕುತಂತ್ರ: ಮುಂದಿನ ವಾರ ದಾಖಲೆ ಬಿಡುಗಡೆಸಂಕೇಶ್ವರ ಬಳಿ ಅಪಘಾತ: ಟಿಪ್ಪರ್‌ಗೆ ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯಅಂಗನವಾಡಿ ನೇಮಕಾತಿಯಲ್ಲಿ ಹಣ ವಸೂಲಿ ಆರೋಪ: ಹುಕ್ಕೇರಿ ಸಿಡಿಪಿಒಗೆ ನೋಟಿಸ್ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲಿಗೆ ಸ್ಥಳಾಂತರ ಸಾಧ್ಯತೆನವಲಗುಂದ ಬಳಿ ಭೀಕರ ಅಪಘಾತ: ಕಾರು–ಕ್ಯಾಂಟರ್ ಡಿಕ್ಕಿಗೆ ನಾಲ್ವರ ಬಲಿಸಿಜೆಪಿ ಪ್ರತಿಭಟನೆಗೆ ದೆಹಲಿ ಸ್ತಬ್ಧ: ಎಲ್ಲೆಡೆ ನಿರ್ಬಂಧಪ್ರತಿಭಟನೆಗೆ ಪರ್ಯಾಯ ಸ್ಥಳ ಗುರುತಿಸಿ: ಸುಪ್ರೀಂ ಕೋರ್ಟಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ಆರೋಪ: ದೆಹಲಿ ಪೊಲೀಸರಿಗೆ ಎನ್‌ಎಚ್‌ಆರ್‌ಸಿ ನೋಟಿಸ್‘ಸಂವಿಧಾನ ಉಳಿಸಲು ಬೀದಿಗಿಳಿಯಿರಿ’: ದೇಶದ ಜನತೆಗೆ ತುಷಾರ್ ಗಾಂಧಿ ಕರೆ