ತೆಹರಾನ್, ಸೆ. 24 : - ಅಮೆರಿಕ ಅಥವಾ ಇಸ್ರೇಲ್ ಮತ್ತೊಮ್ಮೆ ಇರಾನ್ ಮೇಲೆ ದಾಳಿ ನಡೆಸಿದರೆ ಯುದ್ಧದ ವ್ಯಾಪ್ತಿಯನ್ನು ಹಿಂದೂ ಮಹಾಸಾಗರ ಮತ್ತು ಅದಕ್ಕೂ ಮೀರಿದ ಪ್ರದೇಶಗಳಿಗೆ ವಿಸ್ತರಿಸುವ ಸಾಧ್ಯತೆ ಇದೆ ಎಂದು ಇರಾನ್ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಸಲಹೆಗಾರ ಯಾಹ್ಯಾ ರಹೀಮ್ ಸಫಾವಿ ಎಚ್ಚರಿಸಿದ್ದಾರೆ.
ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದ ವಿಡಿಯೊದಲ್ಲಿ ಮಾತನಾಡಿರುವ ಸಫಾವಿ, ಸಂಘರ್ಷ ಈಗಾಗಲೇ ಪರ್ಷಿಯನ್ ಕೊಲ್ಲಿ ಮತ್ತು ಹಾರ್ಮುಜ್ ಜಲಸಂಧಿಯಿಂದ ಕೆಂಪು ಸಮುದ್ರದವರೆಗೆ ವಿಸ್ತರಿಸಿದೆ. ಮತ್ತಷ್ಟು ಯುದ್ಧ ನಡೆದರೆ ಅದರ ವ್ಯಾಪ್ತಿ ಹಿಂದೂ ಮಹಾಸಾಗರ ಮತ್ತು ಅದಕ್ಕೂ ಮೀರಿದ ಪ್ರದೇಶಗಳಿಗೆ ತಲುಪಬಹುದು ಎಂದು ಹೇಳಿದ್ದಾರೆ.
ಭಾರತಕ್ಕೂ ಏಕೆ ಆತಂಕ?
ಭಾರತದ ಇಂಧನ ಆಮದು ಮತ್ತು ವಿದೇಶಿ ವ್ಯಾಪಾರಕ್ಕೆ ಪರ್ಷಿಯನ್ ಕೊಲ್ಲಿ, ಹಾರ್ಮುಜ್ ಜಲಸಂಧಿ, ಕೆಂಪು ಸಮುದ್ರ ಹಾಗೂ ಹಿಂದೂ ಮಹಾಸಾಗರದ ಸಾಗರ ಮಾರ್ಗಗಳು ಅತ್ಯಂತ ಮಹತ್ವದ್ದಾಗಿವೆ. ಹೀಗಾಗಿ ಸಂಘರ್ಷ ಮತ್ತಷ್ಟು ವಿಸ್ತರಿಸಿದರೆ ತೈಲ ಪೂರೈಕೆ, ಸರಕು ಸಾಗಣೆ ಮತ್ತು ಹಡಗುಗಳ ಭದ್ರತೆಯ ಮೇಲೆ ಪರಿಣಾಮ ಬೀರುವ ಆತಂಕವಿದೆ.
ಹಾರ್ಮುಜ್ ಜಲಸಂಧಿಯಲ್ಲಿನ ಅಸ್ಥಿರತೆ ಜಾಗತಿಕ ತೈಲ ಮತ್ತು ಅನಿಲ ಸಾಗಣೆಯ ಮೇಲೆಯೂ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ. ಪರಿಸ್ಥಿತಿ ಮತ್ತಷ್ಟು ಹದಗೆಟ್ಟರೆ ಕಚ್ಚಾ ತೈಲದ ಬೆಲೆ, ಸಾಗಣೆ ವೆಚ್ಚ ಹಾಗೂ ಸಾಗರ ವಿಮಾ ಶುಲ್ಕ ಹೆಚ್ಚಾಗುವ ಸಾಧ್ಯತೆಯಿದೆ.
ಕೆಂಪು ಸಮುದ್ರದಲ್ಲಿನ ಅಸ್ಥಿರತೆಯಿಂದ ಈಗಾಗಲೇ ಹಲವು ಹಡಗುಗಳು ಕೇಪ್ ಆಫ್ ಗುಡ್ ಹೋಪ್ ಸುತ್ತಲಿನ ಪರ್ಯಾಯ ಮಾರ್ಗ ಬಳಸುತ್ತಿವೆ. ಸಂಘರ್ಷ ಹಿಂದೂ ಮಹಾಸಾಗರದತ್ತ ವಿಸ್ತರಿಸಿದರೆ ಭಾರತಕ್ಕೆ ಬರುವ ಮತ್ತು ಭಾರತದಿಂದ ಹೊರಡುವ ವಾಣಿಜ್ಯ ಹಡಗುಗಳ ಸಂಚಾರ ಮತ್ತಷ್ಟು ಸಂಕೀರ್ಣವಾಗಬಹುದು. ಭಾರತೀಯ ನೌಕಾಪಡೆಯ ಸಾಗರ ಕಣ್ಗಾವಲು ಮತ್ತು ವಾಣಿಜ್ಯ ಹಡಗುಗಳ ರಕ್ಷಣೆಯ ಹೊಣೆಗಾರಿಕೆಯೂ ಹೆಚ್ಚಾಗಬಹುದು.
ಆದರೆ ಸಫಾವಿ ತಮ್ಮ ಹೇಳಿಕೆಯಲ್ಲಿ ಹಿಂದೂ ಮಹಾಸಾಗರದಲ್ಲಿ ಯಾವ ದೇಶ, ಸೇನಾ ನೆಲೆ ಅಥವಾ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಸದ್ಯ ಅವರ ಹೇಳಿಕೆ ಸಂಘರ್ಷದ ಭೌಗೋಳಿಕ ವ್ಯಾಪ್ತಿ ಮತ್ತಷ್ಟು ವಿಸ್ತರಿಸಬಹುದು ಎಂಬ ಎಚ್ಚರಿಕೆಗೆ ಸೀಮಿತವಾಗಿದೆ.
ಪರ್ಷಿಯನ್ ಕೊಲ್ಲಿಯಿಂದ ಕೆಂಪು ಸಮುದ್ರದವರೆಗೆ ಸಂಘರ್ಷದ ವ್ಯಾಪ್ತಿ ಈಗಾಗಲೇ ವಿಸ್ತರಿಸಿರುವ ಸಂದರ್ಭದಲ್ಲಿ ಈ ಹೇಳಿಕೆ ಹೊರಬಿದ್ದಿದ್ದು, ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡರೆ ಜಾಗತಿಕ ಇಂಧನ ಪೂರೈಕೆ ಮತ್ತು ಅಂತರರಾಷ್ಟ್ರೀಯ ಸಾಗರ ವ್ಯಾಪಾರದ ಮೇಲಿನ ಪರಿಣಾಮ ಹೆಚ್ಚಾಗುವ ಆತಂಕ ಮೂಡಿದೆ.