LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
International News

ಭಾರತೀಯ ಮೂಲದ ನವಿ ಪಿಳ್ಳೈಗೆ ನೊಬೆಲ್ ಶಾಂತಿ ಪ್ರಶಸ್ತಿ

ಓಸ್ಲೋ (ನಾರ್ವೆ), ಅ. 9: ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿಯ ವಿರುದ್ಧ ಹೋರಾಡಿ, ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳ ರಕ್ಷಣೆ ಹಾಗೂ ಅಂತರರಾಷ್ಟ್ರೀಯ ನ್ಯಾಯಕ್ಕಾಗಿ ಶ್ರಮಿಸಿರುವ ಭಾರತೀಯ ಮೂಲದ ಖ್ಯಾತ ನ್ಯಾಯಶಾಸ್ತ್ರಜ್ಞೆ ನವನೇತಮ್ ‘ನವಿ’ ಪಿಳ್ಳೈ (85) ಅವರಿಗೆ 2026ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಘೋಷಿಸಲಾಗಿದೆ ಎಂದು ವರದಿಯಾಗಿದೆ.

ನಾರ್ವೆಯ ಓಸ್ಲೋದಲ್ಲಿ ಶುಕ್ರವಾರ ನೊಬೆಲ್ ಸಮಿತಿಯ ಅಧ್ಯಕ್ಷ ಜೋರ್ಗನ್ ವಾಟ್ನೆ ಫ್ರೈಡ್ನೆಸ್ ಪ್ರಶಸ್ತಿ ವಿಜೇತರ ಹೆಸರನ್ನು ಪ್ರಕಟಿಸಿದ್ದಾರೆ. ಶಾಂತಿ ಸ್ಥಾಪನೆ, ಅಂತರರಾಷ್ಟ್ರೀಯ ಕಾನೂನಿನ ಬಲವರ್ಧನೆ ಹಾಗೂ ಯುದ್ಧಾಪರಾಧಗಳಿಗೆ ಹೊಣೆಗಾರರನ್ನು ನ್ಯಾಯದ ಮುಂದೆ ತರುವಲ್ಲಿ ಪಿಳ್ಳೈ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಈ ವರ್ಷ ಪ್ರಶಸ್ತಿಗಾಗಿ 208 ವ್ಯಕ್ತಿಗಳು ಹಾಗೂ 79 ಸಂಸ್ಥೆಗಳು ಸೇರಿದಂತೆ ಒಟ್ಟು 287 ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದವು. ಪ್ರಶಸ್ತಿಯು 12 ಮಿಲಿಯನ್ ಸ್ವೀಡಿಷ್ ಕ್ರೋನರ್ ನಗದು ಬಹುಮಾನ, ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಡಿಸೆಂಬರ್ 10ರಂದು ಓಸ್ಲೋದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

ವರ್ಣಭೇದದ ವಿರುದ್ಧ ಸುದೀರ್ಘ ಹೋರಾಟ

1941ರ ಸೆಪ್ಟೆಂಬರ್ 23ರಂದು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ಭಾರತೀಯ ತಮಿಳು ಮೂಲದ ಕುಟುಂಬದಲ್ಲಿ ಜನಿಸಿದ ನವಿ ಪಿಳ್ಳೈ, ಬಾಲ್ಯದಿಂದಲೇ ವರ್ಣಭೇದ ಮತ್ತು ಸಾಮಾಜಿಕ ತಾರತಮ್ಯ ಎದುರಿಸಿದ್ದರು. ಕಾನೂನು ಶಿಕ್ಷಣ ಪಡೆದ ಅವರು 1967ರಲ್ಲಿ ಸ್ವಂತ ವಕೀಲರ ಕಚೇರಿ ಸ್ಥಾಪಿಸಿದರು.

ನೆಲ್ಸನ್ ಮಂಡೇಲಾ ಸೇರಿದಂತೆ ವರ್ಣಭೇದ ವಿರೋಧಿ ಹೋರಾಟಗಾರರ ಪರ ಕಾನೂನು ಹೋರಾಟ ನಡೆಸಿದ ಅವರು, ಮಹಿಳೆಯರು ಮತ್ತು ಶೋಷಿತ ಸಮುದಾಯಗಳ ಹಕ್ಕುಗಳ ರಕ್ಷಣೆಗೆ ಶ್ರಮಿಸಿದರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪಡೆದ ಪಿಳ್ಳೈ, 1988ರಲ್ಲಿ ಕಾನೂನು ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಗಳಿಸಿದರು.

1995ರಲ್ಲಿ ದಕ್ಷಿಣ ಆಫ್ರಿಕಾದ ಹೈಕೋರ್ಟ ನ್ಯಾಯಾಧೀಶೆಯಾಗಿ ನೇಮಕಗೊಂಡ ಅವರು, ಆ ಹುದ್ದೆ ಅಲಂಕರಿಸಿದ ಮೊದಲ ಬಿಳಿಯರಲ್ಲದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ರ್ವಾಂಡಾ ಜನಾಂಗೀಯ ಹತ್ಯೆ ಪ್ರಕರಣದಲ್ಲಿ ಐತಿಹಾಸಿಕ ಪಾತ್ರ

ರ್ವಾಂಡಾದ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಮಂಡಳಿಯ ನ್ಯಾಯಾಧೀಶೆ ಹಾಗೂ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ ಪಿಳ್ಳೈ, ಅತ್ಯಾಚಾರ ಮತ್ತು ಲೈಂಗಿಕ ಹಿಂಸಾಚಾರವನ್ನು ನಿರ್ದಿಷ್ಟ ಸಂದರ್ಭಗಳಲ್ಲಿ ಜನಾಂಗೀಯ ಹತ್ಯೆಯ ಭಾಗವೆಂದು ಪರಿಗಣಿಸುವ ಐತಿಹಾಸಿಕ ನ್ಯಾಯಾಂಗ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ನಂತರ ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ ನ್ಯಾಯಾಧೀಶೆಯಾಗಿಯೂ ಸೇವೆ ಸಲ್ಲಿಸಿದರು. 2008ರಿಂದ 2014ರವರೆಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಆಗಿದ್ದ ಅವರು, ವಿವಿಧ ದೇಶಗಳಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಗಳ ವಿರುದ್ಧ ಧ್ವನಿಯೆತ್ತಿದರು.

ಗಾಜಾ ತನಿಖೆಯಲ್ಲೂ ಪ್ರಮುಖ ಪಾತ್ರ

2021ರಿಂದ 2025ರವರೆಗೆ ಇಸ್ರೇಲ್ ಮತ್ತು ಆಕ್ರಮಿತ ಪ್ಯಾಲೆಸ್ಟೈನ್ ಪ್ರದೇಶಗಳಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆ ಕುರಿತು ತನಿಖೆ ನಡೆಸಿದ ವಿಶ್ವಸಂಸ್ಥೆಯ ಸ್ವತಂತ್ರ ಆಯೋಗದ ಅಧ್ಯಕ್ಷೆಯಾಗಿದ್ದರು.

ಅವರ ನೇತೃತ್ವದ ಆಯೋಗವು ಗಾಜಾದಲ್ಲಿ ಇಸ್ರೇಲ್ ಜನಾಂಗೀಯ ಹತ್ಯೆ ನಡೆಸಿದೆ ಎಂಬ ನಿರ್ಣಯಕ್ಕೆ ಬಂದಿತ್ತು. ಆದರೆ, ಇಸ್ರೇಲ್ ಈ ಆರೋಪವನ್ನು ತಿರಸ್ಕರಿಸಿದೆ.

ಪ್ರಸ್ತುತ ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾ ಸಮುದಾಯದ ವಿರುದ್ಧ ಜನಾಂಗೀಯ ಹತ್ಯೆ ನಡೆದಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯದ ಅಡ್‌ಹಾಕ್ ನ್ಯಾಯಾಧೀಶೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

1901ರಿಂದ ನೀಡಲಾಗುತ್ತಿರುವ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪ್ರತಿವರ್ಷ ಡಿಸೆಂಬರ್ 10ರಂದು ನಾರ್ವೆಯ ಓಸ್ಲೋದಲ್ಲಿ ಪ್ರದಾನ ಮಾಡಲಾಗುತ್ತದೆ. ಈ ಹಿಂದೆ ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್, ಮದರ್ ತೆರೇಸಾ ಹಾಗೂ ಮಲಾಲಾ ಯೂಸುಫ್‌ಜಾಯಿ ಸೇರಿದಂತೆ ಹಲವು ಗಣ್ಯರು ಈ ಗೌರವಕ್ಕೆ ಪಾತ್ರರಾಗಿದ್ದಾರೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೆಹಲಿ ಪ್ರತಿಭಟನೆಗೆ ತೆರಳದಂತೆ ಮಹಾರಾಷ್ಟ್ರ ಪೊಲೀಸರ ನೋಟಿಸ್ಸ್ಟಿಂಗ್‌ ಕುತಂತ್ರ: ಮುಂದಿನ ವಾರ ದಾಖಲೆ ಬಿಡುಗಡೆಸಂಕೇಶ್ವರ ಬಳಿ ಅಪಘಾತ: ಟಿಪ್ಪರ್‌ಗೆ ಬಸ್ ಡಿಕ್ಕಿ, ಚಾಲಕ ಸಾವು, 12 ಮಂದಿಗೆ ಗಾಯಅಂಗನವಾಡಿ ನೇಮಕಾತಿಯಲ್ಲಿ ಹಣ ವಸೂಲಿ ಆರೋಪ: ಹುಕ್ಕೇರಿ ಸಿಡಿಪಿಒಗೆ ನೋಟಿಸ್ಪ್ರಜ್ವಲ್ ರೇವಣ್ಣ ಹಿಂಡಲಗಾ ಜೈಲಿಗೆ ಸ್ಥಳಾಂತರ ಸಾಧ್ಯತೆನವಲಗುಂದ ಬಳಿ ಭೀಕರ ಅಪಘಾತ: ಕಾರು–ಕ್ಯಾಂಟರ್ ಡಿಕ್ಕಿಗೆ ನಾಲ್ವರ ಬಲಿಸಿಜೆಪಿ ಪ್ರತಿಭಟನೆಗೆ ದೆಹಲಿ ಸ್ತಬ್ಧ: ಎಲ್ಲೆಡೆ ನಿರ್ಬಂಧಪ್ರತಿಭಟನೆಗೆ ಪರ್ಯಾಯ ಸ್ಥಳ ಗುರುತಿಸಿ: ಸುಪ್ರೀಂ ಕೋರ್ಟಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ಆರೋಪ: ದೆಹಲಿ ಪೊಲೀಸರಿಗೆ ಎನ್‌ಎಚ್‌ಆರ್‌ಸಿ ನೋಟಿಸ್‘ಸಂವಿಧಾನ ಉಳಿಸಲು ಬೀದಿಗಿಳಿಯಿರಿ’: ದೇಶದ ಜನತೆಗೆ ತುಷಾರ್ ಗಾಂಧಿ ಕರೆ