LIVE TV LocalCrimeNationalInternationalPoliticsFinancialEducationTechnologyEntertainmentSportsHealthFeatureTravelingBeautyRecipes
International News

ಯುದ್ಧ ಅಂತ್ಯಕ್ಕೆ ಷರತ್ತು ಮತ್ತಷ್ಟು ಕಠಿಣಗೊಳಿಸಿದ ಇರಾನ್

ತೆಹರಾನ್, ಸೆ. 23 : (ಸಮದರ್ಶಿ ಸುದ್ದಿ) - ಅಮೆರಿಕದೊಂದಿಗೆ ಮಾಡಿಕೊಂಡಿದ್ದ ಹಿಂದಿನ ಒಪ್ಪಂದ ಮುರಿದುಬಿದ್ದ ಹಿನ್ನೆಲೆಯಲ್ಲಿ ಯುದ್ಧ ಅಂತ್ಯಗೊಳಿಸಲು ಇರಾನ್ ತನ್ನ ಷರತ್ತುಗಳನ್ನು ಮತ್ತಷ್ಟು ಕಠಿಣಗೊಳಿಸಿದೆ. “ನಮ್ಮ ಷರತ್ತುಗಳನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಅಮೆರಿಕಕ್ಕೆ ಬೇರೆ ಮಾರ್ಗವಿಲ್ಲ” ಎಂದು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ ವಕ್ತಾರ ಹೊಸೈನ್ ಮೊಹೆಬಿ ಹೇಳಿದ್ದಾರೆ.

ಎಎಫ್‌ಪಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಅಮೆರಿಕವೇ ಹಿಂದಿನ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದರು. “ನಾವು ಅವರ ಆಟದ ವಸ್ತುವಲ್ಲ. ಸಹಿ ಮಾಡಿದ ಒಪ್ಪಂದವನ್ನು ಬೇಕೆಂದಾಗ ಏಕಪಕ್ಷೀಯವಾಗಿ ಮುರಿಯಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಷರತ್ತುಗಳನ್ನು ಇನ್ನಷ್ಟು ಬಿಗಿಗೊಳಿಸಿದ್ದೇವೆ” ಎಂದರು.

ಹೊಸ ಷರತ್ತುಗಳ ಭಾಗವಾಗಿ ವಿದೇಶಗಳಲ್ಲಿ ಸ್ಥಗಿತಗೊಂಡಿರುವ ಇರಾನ್‌ನ 24 ಶತಕೋಟಿ ಡಾಲರ್ ಆಸ್ತಿಯನ್ನು ಮಾತುಕತೆಗೂ ಮುನ್ನ ಸಂಪೂರ್ಣವಾಗಿ ಬಿಡುಗಡೆ ಮಾಡಬೇಕು ಎಂದು ಇರಾನ್ ಒತ್ತಾಯಿಸಿದೆ. ಈ ಹಿಂದೆ ಹಂತ ಹಂತವಾಗಿ ಹಣ ಬಿಡುಗಡೆ ಮಾಡುವ ಪ್ರಸ್ತಾವವಿದ್ದರೆ, ಈಗ ಸಂಪೂರ್ಣ ಮೊತ್ತವನ್ನು ಮೊದಲೇ ಬಿಡುಗಡೆ ಮಾಡಬೇಕೆಂಬ ನಿಲುವು ತೆಗೆದುಕೊಂಡಿದೆ.

ಇದರೊಂದಿಗೆ ಹಿಂದಿನ ಒಪ್ಪಂದದಲ್ಲಿ ಇರದ ಯೆಮೆನ್ ವಿಷಯವನ್ನೂ ಹೊಸ ಷರತ್ತಾಗಿ ಸೇರಿಸಲಾಗಿದೆ. ಯೆಮೆನ್‌ನ ಹೌಥಿ ನಿಯಂತ್ರಿತ ಬಂದರು ಮತ್ತು ವಿಮಾನ ನಿಲ್ದಾಣಗಳ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಬೇಕು ಎಂದು ಇರಾನ್ ಒತ್ತಾಯಿಸಿದೆ.

ಹೊರ್ಮುಜ್ ಜಲಸಂಧಿ ಸುತ್ತಮುತ್ತ ನಡೆಯುತ್ತಿರುವ ದಾಳಿಗಳು ಶಾಂತಿ ಪ್ರಯತ್ನಗಳಿಗೆ ಅಡ್ಡಿಯಾಗಿವೆ. ಜಾಗತಿಕ ತೈಲ ಮತ್ತು ಇತರ ಸರಕು ಸಾಗಣೆಗೆ ಈ ಜಲಮಾರ್ಗ ಅತ್ಯಂತ ಮಹತ್ವದ್ದಾಗಿದೆ. ಇದೇ ವೇಳೆ, ಅಮೆರಿಕ ಸೇನಾ ಒತ್ತಡ ಕಡಿಮೆ ಮಾಡಿ ಇರಾನ್ ಬಂದರುಗಳ ಮೇಲಿನ ದಿಗ್ಬಂಧನ ತೆರವುಗೊಳಿಸಿದರೆ ಒಂದು ವಾರದೊಳಗೆ ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಸಿದ್ಧವಿರುವುದಾಗಿ ಇರಾನ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಮೆರಿಕ ಮತ್ತೆ ದಾಳಿ ನಡೆಸಿದರೆ ಈ ಬಾರಿ ಕೇವಲ ಪ್ರತಿದಾಳಿಗೆ ಸೀಮಿತವಾಗದೆ ಹೆಚ್ಚು ಆಕ್ರಮಣಕಾರಿ ನಿಲುವು ಅನುಸರಿಸಲಾಗುವುದು ಎಂದು ಮೊಹೆಬಿ ಎಚ್ಚರಿಸಿದ್ದಾರೆ. ಅದೇ ವೇಳೆ ಸಂಘರ್ಷವನ್ನು ಮತ್ತಷ್ಟು ವಿಸ್ತರಿಸುವುದು ಇರಾನ್‌ನ ಉದ್ದೇಶವಲ್ಲ ಎಂಬ ನಿಲುವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಇನ್ನೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ 22ರಂದು ಇರಾನ್‌ನೊಂದಿಗೆ ಮಾತುಕತೆ ಮುಂದುವರಿದಿದ್ದು, ಅಂತಿಮವಾಗಿ ಒಪ್ಪಂದ ಸಾಧ್ಯವಾಗಲಿದೆ ಎಂಬ ಆಶಾವಾದ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಠಿಣ ಸಾರ್ವಜನಿಕ ಹೇಳಿಕೆಗಳ ನಡುವೆಯೂ ರಾಜತಾಂತ್ರಿಕ ಮಾತುಕತೆ ಸಂಪೂರ್ಣ ಸ್ಥಗಿತಗೊಂಡಿಲ್ಲ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST