ಹೊಸದಿಲ್ಲಿ, ಅ. 19: ದೆಹಲಿಯ ಜಂತರ್ ಮಂತರ್‌ನಲ್ಲಿ ನಿಷೇಧ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಆರೋಪದಡಿ ಬಂಧಿತರಾಗಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನಾಯಕರಾದ ಸೌರವ್ ದಾಸ್ ಹಾಗೂ ಆಶುತೋಷ್ ರಾಂಕಾ ಅವರ ನ್ಯಾಯಾಂಗ ಬಂಧನವನ್ನು ಮತ್ತೆರಡು ದಿನಗಳ ಕಾಲ ವಿಸ್ತರಿಸಲಾಗಿದೆ.
ಸೋಮವಾರ ಇಬ್ಬರು ನಾಯಕರನ್ನು ಮಂದಿರ್ ಮಾರ್ಗ್ ಪೊಲೀಸ್ ಠಾಣೆಯಲ್ಲಿ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಗಿದ್ದು, ಅವರ ನ್ಯಾಯಾಂಗ ಬಂಧನವನ್ನು ಬುಧವಾರದವರೆಗೆ ವಿಸ್ತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಂತರ್ ಮಂತರ್‌ಗೆ ಪ್ರತಿಭಟನಾ ತಾಣದ ಸ್ಥಾನಮಾನ ರದ್ದುಗೊಳಿಸಿರುವುದನ್ನು ವಿರೋಧಿಸಿ ಅಕ್ಟೋಬರ್ 13ರಂದು ಸೌರವ್ ದಾಸ್, ಆಶುತೋಷ್ ರಾಂಕಾ ಸೇರಿದಂತೆ ಹಲವರು ಅಲ್ಲಿಗೆ ಪ್ರವೇಶಿಸಿ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದು, ಆರಂಭದಲ್ಲಿ 5 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.
ಇದೀಗ ಬಂಧನದ ಅವಧಿಯನ್ನು ಮತ್ತೆ ವಿಸ್ತರಿಸಿರುವುದಕ್ಕೆ ಸಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇಬ್ಬರು ನಾಯಕರ ಬಿಡುಗಡೆ ತಡೆಯುವ ಉದ್ದೇಶದಿಂದಲೇ ಜಾಮೀನು ಪ್ರಕ್ರಿಯೆಯನ್ನು ವಿಳಂಬಗೊಳಿಸಲಾಗುತ್ತಿದೆ ಎಂದು ಪಕ್ಷ ಆರೋಪಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ನ್ಯಾಯಾಂಗ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಮೂಲಕ ಸೌರವ್ ದಾಸ್ ಹಾಗೂ ಆಶುತೋಷ್ ರಾಂಕಾ ಅವರ ಬಂಧನವನ್ನು ಉದ್ದೇಶಪೂರ್ವಕವಾಗಿ ಮುಂದುವರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇಬ್ಬರು ನಾಯಕರ ಬಿಡುಗಡೆಗಾಗಿ ಸಲ್ಲಿಸಿರುವ ಜಾಮೀನು ಖಾತರಿಗಳನ್ನು ಅಸ್ಪಷ್ಟ ಕಾರಣಗಳನ್ನು ಮುಂದಿಟ್ಟು ತಿರಸ್ಕರಿಸಲಾಗುತ್ತಿದೆ. ಸರ್ಕಾರವು ಅವರ ಬಿಡುಗಡೆ ತಡೆಯಲು ವಿವಿಧ ತಂತ್ರಗಳನ್ನು ಅನುಸರಿಸುತ್ತಿದೆ ಎಂದು ದೀಪ್ಕೆ ದೂರಿದ್ದಾರೆ.
ಬಂಧಿತರನ್ನು ಅಕ್ಟೋಬರ್ 21ರ ಬುಧವಾರ ಮತ್ತೆ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.