LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
State News

ಇನ್ನೂ ತುಂಬದ ಮಲಪ್ರಭಾ ಜಲಾಶಯ

ಬೆಂಗಳೂರು, ಆಗಸ್ಟ 19: ಉತ್ತರ ಕರ್ನಾಟಕದ ಪ್ರಮುಖ ಐದು ಜಲಾಶಯಗಳ ಪೈಕಿ ನಾಲ್ಕು ಜಲಾಶಯಗಳು ಭರ್ತಿಯಾಗಿದ್ದರೆ, ಬೆಳಗಾವಿ ಜಿಲ್ಲೆಯ ಮಲಪ್ರಭಾ ಜಲಾಶಯ ಮಾತ್ರ ಇನ್ನೂ ಶೇ 58ರಷ್ಟು ಭರ್ತಿಯಾಗಿದೆ. ಮಳೆಗಾಲದ ಮೂರನೇ ತಿಂಗಳು ಮುಕ್ತಾಯದ ಹಂತಕ್ಕೆ ಬಂದಿದ್ದರೂ ಮಲಪ್ರಭಾ ಜಲಾಶಯಕ್ಕೆ ನೀರಿನ ಒಳಹರಿವು ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಳವಾಗಿಲ್ಲ.

ಈ ಬಾರಿ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಆರಂಭದಲ್ಲಿ ಹಲವು ಜಲಾಶಯಗಳಿಗೆ ನೀರಿನ ಒಳಹರಿವು ಕಡಿಮೆಯಾಗಿತ್ತು. ಆದರೆ ಕಳೆದ ಒಂದು ತಿಂಗಳಲ್ಲಿ ಮಲೆನಾಡು ಹಾಗೂ ಮಹಾರಾಷ್ಟ್ರದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾದ ಪರಿಣಾಮ ಪ್ರಮುಖ ಜಲಾಶಯಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.

ಆಲಮಟ್ಟಿಯಿಂದ ಭಾರಿ ಹೊರಹರಿವು

ಉತ್ತರ ಕರ್ನಾಟಕದ ಅತಿ ದೊಡ್ಡ ಜಲಾಶಯಗಳಲ್ಲೊಂದಾದ ಆಲಮಟ್ಟಿಯ ಲಾಲ್ ಬಹದ್ದೂರ ಶಾಸ್ತ್ರಿ ಜಲಾಶಯ ತಿಂಗಳ ಹಿಂದೆಯೇ ಭರ್ತಿಯಾಗಿದೆ. ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ನಿರಂತರವಾಗಿ ನೀರು ಹರಿದುಬರುತ್ತಿದ್ದು, ಆಲಮಟ್ಟಿ ಜಲಾಶಯಕ್ಕೂ ಒಳಹರಿವು ಮುಂದುವರಿದಿದೆ.

ಜಲಾಶಯಕ್ಕೆ ಪ್ರಸ್ತುತ 48,348 ಕ್ಯುಸೆಕ್ ನೀರು ಒಳಹರಿವು ಇದ್ದು, 51 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ 122.30 ಟಿಎಂಸಿ ನೀರು ಸಂಗ್ರಹವಿದ್ದು, ಶೇ 99ರಷ್ಟು ಭರ್ತಿಯಾಗಿದೆ. ನೀರಿನ ಮಟ್ಟ 519.63 ಮೀಟರ್‌ನಷ್ಟಿದ್ದು, ಗರಿಷ್ಠ ಮಟ್ಟ 519.60 ಮೀಟರ್ ಆಗಿದೆ. ಜಲಾಶಯದ ಒಟ್ಟು ನೀರು ಸಂಗ್ರಹ ಸಾಮರ್ಥ್ಯ 123 ಟಿಎಂಸಿ.

ಆಲಮಟ್ಟಿಯಿಂದ ಹೊರಬಿಡಲಾಗುತ್ತಿರುವ ನೀರು ಕೃಷ್ಣಾ ನದಿ ಮೂಲಕ ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯಕ್ಕೂ ಹರಿದುಬರುತ್ತಿದೆ. ಬಸವಸಾಗರ ಜಲಾಶಯಕ್ಕೆ ಪ್ರಸ್ತುತ 50 ಸಾವಿರ ಕ್ಯುಸೆಕ್ ನೀರು ಒಳಹರಿವು ಇದ್ದು, 55,555 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ನಾರಾಯಣಪುರ ಜಲಾಶಯದಲ್ಲಿ 32.84 ಟಿಎಂಸಿ ನೀರು ಸಂಗ್ರಹವಿದ್ದು, ಒಟ್ಟು 33.31 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಜಲಾಶಯದ ನೀರಿನ ಮಟ್ಟ 1,614.64 ಅಡಿಯಷ್ಟಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 30 ಟಿಎಂಸಿ ನೀರು ಸಂಗ್ರಹವಾಗಿತ್ತು.

ಭರ್ತಿಯಾದ ಘಟಪ್ರಭಾ

ಬೆಳಗಾವಿ ಜಿಲ್ಲೆಯ ಘಟಪ್ರಭಾ ಜಲಾಶಯವೂ ಶೇ 100ರಷ್ಟು ಭರ್ತಿಯಾಗಿದೆ. ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಪ್ರಸ್ತುತ 6,489 ಕ್ಯುಸೆಕ್ ನೀರು ಒಳಹರಿವು ಇದೆ. ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಹೊರಹರಿವನ್ನು ಹೆಚ್ಚಿಸಲಾಗಿದ್ದು, 33 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ಜಲಾಶಯದ ನೀರಿನ ಮಟ್ಟ ಗರಿಷ್ಠ 2,174.80 ಅಡಿಗೆ ತಲುಪಿದೆ. ಒಟ್ಟು 51 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯ ಕಳೆದ ವರ್ಷ ಇದೇ ದಿನವೂ ಭರ್ತಿಯಾಗಿತ್ತು.

ಮಲಪ್ರಭಾ ಇನ್ನೂ ಅರ್ಧದಷ್ಟೇ

ಬೆಳಗಾವಿ ಜಿಲ್ಲೆಯ ಮಲಪ್ರಭಾ ಜಲಾಶಯ ಮಾತ್ರ ನಿರೀಕ್ಷಿತ ಪ್ರಮಾಣದಲ್ಲಿ ಭರ್ತಿಯಾಗಿಲ್ಲ. ಜಲಾಶಯದಲ್ಲಿ ಪ್ರಸ್ತುತ ಶೇ 58ರಷ್ಟು ನೀರು ಸಂಗ್ರಹವಾಗಿದ್ದು, 22 ಟಿಎಂಸಿ ನೀರು ಲಭ್ಯವಿದೆ. ಜಲಾಶಯಕ್ಕೆ 2,244 ಕ್ಯುಸೆಕ್ ನೀರು ಒಳಹರಿವು ಇದೆ.

ಮಲಪ್ರಭಾ ಜಲಾಶಯದ ಒಳಹರಿವು ಕಡಿಮೆ ಇರುವುದರಿಂದ ಈ ಭಾಗದ ರೈತರಲ್ಲಿ ನೀರಿನ ಲಭ್ಯತೆ ಕುರಿತು ಆತಂಕ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ ಜಲಾಶಯದ ನೀರಿನ ಮಟ್ಟದಲ್ಲೂ ಏರಿಕೆಯಾಗುವ ನಿರೀಕ್ಷೆಯಿದೆ.

ಭರ್ತಿಯತ್ತ ತುಂಗಭದ್ರಾ

ಮಲೆನಾಡು ಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯವೂ ಭರ್ತಿಯ ಹಂತಕ್ಕೆ ತಲುಪಿದೆ. ಜೂನ್ ಅಂತ್ಯದಲ್ಲಿ ಜಲಾಶಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಹರಿದುಬಾರದ ಹಿನ್ನೆಲೆಯಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ನಂತರ ಉತ್ತಮ ಮಳೆಯಾದ ಪರಿಣಾಮ ಜಲಾಶಯದ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ.

ಪ್ರಸ್ತುತ ತುಂಗಭದ್ರಾ ಜಲಾಶಯಕ್ಕೆ 12 ಸಾವಿರ ಕ್ಯುಸೆಕ್ ನೀರು ಒಳಹರಿವು ಇದ್ದು, 8,654 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿ 1,630 ಅಡಿ ನೀರಿನ ಮಟ್ಟವಿದ್ದು, 94 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯ ಶೇ 89ರಷ್ಟು ಭರ್ತಿಯಾಗಿದೆ.

ತುಂಗಭದ್ರಾ ಜಲಾಶಯದ ಗರಿಷ್ಠ ನೀರಿನ ಮಟ್ಟ 1,633 ಅಡಿಯಾಗಿದ್ದು, ಒಟ್ಟು 105.79 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 74 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿತ್ತು.:::

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST