LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
Local News

ಮಾಂಜಾ ದಾರಕ್ಕೆ ಮತ್ತೊಂದು ಜೀವ ಬಲಿ: ವಾರದಲ್ಲಿ 2ನೇ ಸಾವು

ಬೆಳಗಾವಿ, ಅ. 2 : (ಸಮದರ್ಶಿ ಸುದ್ದಿ) - ಗಾಳಿಪಟ ಹಾರಿಸುವ ಸಂಭ್ರಮ ಬೆಳಗಾವಿ ನಗರದಲ್ಲಿ ಜೀವಕ್ಕೆ ಕಂಟಕವಾಗಿ ಪರಿಣಮಿಸುತ್ತಿದೆ. ಅಪಾಯಕಾರಿ ಮಾಂಜಾ ದಾರ ಹಾಗೂ ಗಾಳಿಪಟದ ಹುಚ್ಚಾಟಕ್ಕೆ ಸಂಬಂಧಿಸಿದ ಪ್ರತ್ಯೇಕ ಘಟನೆಗಳಲ್ಲಿ ಕೇವಲ ಎರಡೇ ದಿನಗಳ ಅಂತರದಲ್ಲಿ ಬಾಲಕನೊಬ್ಬ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, ನಿಷೇಧಿತ ಮಾಂಜಾ ದಾರದ ಮಾರಾಟ ಮತ್ತು ಬಳಕೆಯ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರಿಂದ ಆಗ್ರಹ ಕೇಳಿಬಂದಿದೆ.

ಮಹಾಂತೇಶನಗರದ ನಿವಾಸಿ ಧ್ರುವ ಸಂತೋಷ ಕರಜಗಿ (19) ಮಾಂಜಾ ದಾರಕ್ಕೆ ಬಲಿಯಾದ ಯುವಕ. ಧ್ರುವ ತಮ್ಮ ದ್ವಿಚಕ್ರ ವಾಹನದಲ್ಲಿ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಗಾಂಧಿನಗರದ ಬಳಿ ರಸ್ತೆಗೆ ಅಡ್ಡಲಾಗಿ ಬಂದಿದ್ದ ಗಾಳಿಪಟದ ಹರಿತವಾದ ಮಾಂಜಾ ದಾರ ಏಕಾಏಕಿ ಅವರ ಕುತ್ತಿಗೆಗೆ ಸಿಲುಕಿದೆ ಎನ್ನಲಾಗಿದೆ.

ಬೈಕ್ ಚಲಾಯಿಸುತ್ತಿದ್ದ ವೇಗದಲ್ಲಿಯೇ ದಾರ ಕುತ್ತಿಗೆಗೆ ಸಿಲುಕಿದ್ದರಿಂದ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವವಾಗಿದೆ. ಗಾಯಗೊಂಡ ಧ್ರುವ ಅವರನ್ನು ತಕ್ಷಣ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಚಿಕಿತ್ಸೆ ನೀಡಿದರೂ ಗಾಯದ ತೀವ್ರತೆಯಿಂದ ಅವರು ಮೃತಪಟ್ಟಿದ್ದಾರೆ.

ಈ ಘಟನೆ ನಗರದಲ್ಲಿ ಆತಂಕ ಮೂಡಿಸಿದ್ದು, ದ್ವಿಚಕ್ರ ವಾಹನ ಸವಾರರ ಸುರಕ್ಷತೆಯ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆ ಎದ್ದಿದೆ. ಗಾಳಿಪಟಕ್ಕೆ ಬಳಸುವ ಕೆಲವು ಮಾಂಜಾ ದಾರಗಳು ಅತ್ಯಂತ ಹರಿತವಾಗಿರುವುದರಿಂದ ವೇಗವಾಗಿ ಸಾಗುವ ವಾಹನ ಸವಾರರ ಕುತ್ತಿಗೆಗೆ ಸಿಲುಕಿದರೆ ಮಾರಣಾಂತಿಕ ಗಾಯವಾಗುವ ಅಪಾಯವಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬೆಳಗಾವಿ ಉತ್ತರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆ ನಡೆದ ಗಾಂಧಿನಗರ ಪ್ರದೇಶ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಮಾಳಮಾರುತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ದುರಂತ ಸಂಭವಿಸುವ ಮುನ್ನವೇ ವಡಗಾವಿಯ ನಿಜಾಮಿಯಾ ನಗರದಲ್ಲಿ ಗಾಳಿಪಟಕ್ಕೆ ಸಂಬಂಧಿಸಿದ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆದಿತ್ತು. ಗಾಳಿಪಟ ಹಿಡಿಯಲು ಯತ್ನಿಸುತ್ತಿದ್ದ 9 ವರ್ಷದ ಬಾಲಕ ಎರಡನೇ ಮಹಡಿಯ ಟೆರೇಸ್‌ನಿಂದ ಕೆಳಗೆ ಬಿದ್ದು ಮೃತಪಟ್ಟಿದ್ದನು. ಆ ಘಟನೆಯ ಆಘಾತದಿಂದ ನಗರ ಹೊರಬರುವ ಮುನ್ನವೇ 19 ವರ್ಷದ ಯುವಕ ಮಾಂಜಾ ದಾರಕ್ಕೆ ಬಲಿಯಾಗಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಮತ್ತು ಆತಂಕ ಹೆಚ್ಚಿಸಿದೆ.

ಎರಡೇ ದಿನಗಳಲ್ಲಿ ಗಾಳಿಪಟಕ್ಕೆ ಸಂಬಂಧಿಸಿದ ಎರಡು ಪ್ರತ್ಯೇಕ ಘಟನೆಗಳಲ್ಲಿ ಎರಡು ಜೀವಗಳು ಬಲಿಯಾಗಿರುವ ಹಿನ್ನೆಲೆಯಲ್ಲಿ ಮಾಂಜಾ ದಾರದ ಮಾರಾಟ ಮತ್ತು ಬಳಕೆಯ ಮೇಲೆ ಪರಿಣಾಮಕಾರಿ ನಿಗಾ ವಹಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ. ನಿಷೇಧಿತ ಮಾಂಜಾ ದಾರವನ್ನು ಅಕ್ರಮವಾಗಿ ಮಾರಾಟ ಮಾಡುವವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜನನಿಬಿಡ ಪ್ರದೇಶಗಳು, ಮುಖ್ಯ ರಸ್ತೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಮೀಪ ಗಾಳಿಪಟ ಹಾರಿಸುವುದರಿಂದ ಪಾದಚಾರಿಗಳು ಮತ್ತು ದ್ವಿಚಕ್ರ ವಾಹನ ಸವಾರರಿಗೆ ಅಪಾಯ ಎದುರಾಗುತ್ತಿದೆ. ಪೊಲೀಸರು ಹಾಗೂ ಸಂಬಂಧಪಟ್ಟ ಇಲಾಖೆಗಳು ವಿಶೇಷ ಕಾರ್ಯಾಚರಣೆ ನಡೆಸಿ ಅಪಾಯಕಾರಿ ಮಾಂಜಾ ದಾರದ ಮಾರಾಟ ಮತ್ತು ಬಳಕೆಗೆ ಕಡಿವಾಣ ಹಾಕಬೇಕು ಎಂಬ ಆಗ್ರಹವೂ ವ್ಯಕ್ತವಾಗಿದೆ.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST