LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
National News

ಗ್ಯಾನೇಶ ಕುಮಾರ ವಿರುದ್ಧ ಜನಾಕ್ರೋಶ: ದಿಲ್ಲಿಯಲ್ಲಿ 700ಕ್ಕೂ ಹೆಚ್ಚು ಮಂದಿ ವಶಕ್ಕೆ

ಹೊಸದಿಲ್ಲಿ, ಅ. 2 : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು ಹಾಗೂ ಮತದಾರರ ಹೆಸರುಗಳ ಅಳಿಸುವಿಕೆ ಆರೋಪಗಳನ್ನು ವಿರೋಧಿಸಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ಅವರ ರಾಜೀನಾಮೆಗೆ ಆಗ್ರಹಿಸಿ ಶುಕ್ರವಾರ ದೆಹಲಿಯಲ್ಲಿ ನಡೆದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಂತರ್‌ ಮಂತರ್‌ ಹಾಗೂ ಸುತ್ತಮುತ್ತ ಪ್ರತಿಭಟನೆಗೆ ಮುಂದಾದ ಆಮ್ ಆದ್ಮಿ ಪಕ್ಷದ ಮುಖಂಡರು, ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ 700ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

news_1790941252_6_342.webp

 news_1790941252_5_632.webp

 news_1790941252_4_363.webp

 ಆಮ್ ಆದ್ಮಿ ಪಕ್ಷದ ಮುಖಂಡರಾದ ಸೌರಭ್ ಭಾರದ್ವಾಜ್, ಸಂಜೀವ್ ಝಾ, ಅತಿಶಿ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎಐಎಸ್‌ಎ, ಎಸ್‌ಎಫ್‌ಐ, ಎನ್‌ಎಸ್‌ಯುಐ, ಡಿವೈಎಫ್‌ಐ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಮತ್ತು ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂಬ ಆರೋಪಗಳನ್ನು ಮುಂದಿಟ್ಟುಕೊಂಡು ಪ್ರತಿಭಟನಾಕಾರರು ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸಿದರು.

ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ವಿವಿಧೆಡೆಯಿಂದ ಕಾರ್ಯಕರ್ತರು ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರು ಹಲವು ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಪ್ರತಿಭಟನಾಕಾರರನ್ನು ತಡೆದರು. ಪ್ರತಿಭಟನಾ ಸ್ಥಳಕ್ಕೆ ತೆರಳುತ್ತಿದ್ದ ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರನ್ನು ನಾರ್ತ್ ಅವೆನ್ಯೂ ಪ್ರದೇಶದಲ್ಲೇ ಪೊಲೀಸರು ತಡೆದು ವಶಕ್ಕೆ ಪಡೆದರು ಎಂದು ವರದಿಯಾಗಿದೆ.

‘ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ನನ್ನನ್ನು ಹಾಗೂ ಸಂಜೀವ್ ಝಾ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ’ ಎಂದು ಎಎಪಿ ಮುಖಂಡ ಸೌರಭ್ ಭಾರದ್ವಾಜ್ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಆರೋಪಿಸಿದ್ದಾರೆ.

news_1790941289_3_595.webp

news_1790941289_2_979.webp

news_1790941289_1_299.webp

news_1790941289_0_409.webp

ಜಂತರ್‌ ಮಂತರ್‌ಗೆ ತೆರಳುತ್ತಿದ್ದ ಎಸ್‌ಎಫ್‌ಐ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳ ನೂರಾರು ಕಾರ್ಯಕರ್ತರನ್ನು ಪೊಲೀಸರು ಮಾರ್ಗಮಧ್ಯೆಯೇ ತಡೆದರು. ಎಎಪಿ ಮುಖಂಡರು ಹಾಗೂ ವಿವಿಧ ವಿದ್ಯಾರ್ಥಿ ಸಂಘಟನೆಗಳಿಗೆ ಸೇರಿದ ಸುಮಾರು 700 ಮಂದಿಯನ್ನು ಜಂತರ್‌ ಮಂತರ್‌ ಸುತ್ತಮುತ್ತ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಪ್ರತಿಭಟನೆ ಹಿನ್ನೆಲೆಯಲ್ಲಿ ಜಂತರ್‌ ಮಂತರ್‌ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಪ್ರತಿಭಟನಾ ಪ್ರದೇಶದ ಸುತ್ತ ಇಂಟರ್‌ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಡಿವೈಎಫ್‌ಐ ಮತ್ತು ಎಸ್‌ಎಫ್‌ಐನ ಹಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಎಸ್‌ಎಫ್‌ಐ ಪ್ರಧಾನ ಕಾರ್ಯದರ್ಶಿ ಐಶೆ ಘೋಷ್ ತಿಳಿಸಿದ್ದಾರೆ. ದೆಹಲಿಯ ಅಪರಾಧಗಳನ್ನು ನಿಯಂತ್ರಿಸಲು ಸಾಧ್ಯವಾಗದ ಪೊಲೀಸರು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಪ್ರತಿಭಟನೆ ನಡೆಯುವಾಗ ದೊಡ್ಡ ಸಂಖ್ಯೆಯಲ್ಲಿ ರಸ್ತೆಗಿಳಿದಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಎನ್‌ಎಸ್‌ಯುಐ ಕಾರ್ಯಕರ್ತರನ್ನೂ ಪ್ರತಿಭಟನಾ ಸ್ಥಳದಿಂದ ವಶಕ್ಕೆ ಪಡೆಯಲಾಯಿತು. ಫಿರೋಜ್‌ ಶಾ ರಸ್ತೆಯಲ್ಲಿ ಕೆಲವು ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ದಾಟಿ ಜಂತರ್‌ ಮಂತರ್‌ನತ್ತ ತೆರಳಲು ಯತ್ನಿಸಿದ ದೃಶ್ಯಗಳೂ ಕಂಡುಬಂದವು.

ಪ್ರತಿಭಟನಾಕಾರರು ಎಸ್‌ಐಆರ್‌ ಪ್ರಕ್ರಿಯೆಯ ಕುರಿತು ಪಾರದರ್ಶಕ ತನಿಖೆ ನಡೆಸಬೇಕು, ಮತದಾರರ ಹೆಸರುಗಳ ಅಳಿಸುವಿಕೆ ಕುರಿತ ಆರೋಪಗಳಿಗೆ ಚುನಾವಣಾ ಆಯೋಗ ಉತ್ತರ ನೀಡಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ ಕುಮಾರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST