Web Stories
Samadarshi News
ePaper
|Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
|Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ರಾಷ್ಟ್ರ ಗೌರವ ಮತ್ತು ರಾಜತಾಂತ್ರಿಕತೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು ನರಕಕೂಪ ಎಂದು ಉಲ್ಲೇಖಿಸಿರುವುದು ಮತ್ತು ಭಾರತೀಯರನ್ನು ಲ್ಯಾಪಟಾಪ್ ಹಿಡಿದ ಗ್ಯಾಂಗ್‌ಸ್ಟರ್‌ಗಳು ಎಂದಿದ್ದು ಕೇವಲ ವಿವಾದಾತ್ಮಕ ಹೇಳಿಕೆಗಳಲ್ಲ, ಇವು ಭಾರತದ ವಿದೇಶಾಂಗ ನೀತಿಯ ದಿಕ್ಕು ಮತ್ತು ದಕ್ಷತೆಯ ಮೇಲೆಯೇ ಗಂಭೀರ ಪ್ರಶ್ನೆ ಎತ್ತಿದ ಘಟನೆಗಳು. ಜಾಗತಿಕ ವೇದಿಕೆಯಲ್ಲಿ ಭಾರತದ ಪ್ರಭಾವ ಹೆಚ್ಚಾಗಿದೆ, ವಿಶ್ವರಾಜಕೀಯದಲ್ಲಿ ದೇಶದ ಸ್ಥಾನ ಬಲವಾಗಿದೆ ಎಂಬ ಸರ್ಕಾರದ ನಿರಂತರ ಕಥನಕ್ಕೆ ಈ ಘಟನೆಗಳು ನೇರ ಸವಾಲು ಎಸೆದಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯಲ್ಲಿ ವೈಯಕ್ತಿಕ ರಾಜತಾಂತ್ರಿಕತೆಗೆ ಅಪಾರ ಪ್ರಾಮುಖ್ಯತೆ ನೀಡಲಾಗಿದೆ. ವಿಶ್ವದ ಪ್ರಮುಖ ನಾಯಕರೊಂದಿಗೆ ವೈಯಕ್ತಿಕ ಆತ್ಮೀಯತೆ ನಿರ್ಮಿಸುವುದು, ಭವ್ಯ ಸ್ವಾಗತಗಳು, ಜಾಗತಿಕ ವೇದಿಕೆಗಳಲ್ಲಿ ದೊಡ್ಡ ಕಾರ್ಯಕ್ರಮಗಳನ್ನೇ ಸಾಧನೆಯಾಗಿ ಬಿಂಬಿಸಲಾಗಿದೆ. ಆದರೆ ರಾಜತಾಂತ್ರಿಕತೆ ಎಂದರೆ ಕೇವಲ ವೈಯಕ್ತಿಕ ಸಂಬಂಧಗಳ ನಿರ್ಮಾಣವಲ್ಲ, ಅದು ರಾಷ್ಟ್ರದ ದೀರ್ಘಕಾಲಿಕ ಹಿತಾಸಕ್ತಿಗಳನ್ನು ಕಾಪಾಡುವ ಸಮಗ್ರ ಕಾರ್ಯತಂತ್ರ.

ಅಮೆರಿಕದಲ್ಲಿದ್ದ ಭಾರತೀಯರನ್ನು ಕೈಕೋಳ ಹಾಕಿ ಅವಮಾನಕರ ರೀತಿಯಲ್ಲಿ ಮಿಲಿಟರಿ ವಿಮಾನಗಳಲ್ಲಿ ಭಾರತಕ್ಕೆ ಕಳುಹಿಸಿದಾಗಲೇ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಬೇಕಿತ್ತು. ಆಗ ಭಾರತ ಸರ್ಕಾರದಿಂದ ತಕ್ಕ ಮಟ್ಟಿನ ತೀವ್ರ ಆಕ್ಷೇಪ ವ್ಯಕ್ತವಾಗದಿರುವುದು ಇಂದು ಈ ರೀತಿಯ ಘಟನೆಗಳಿಗೆ ಆಸ್ಪದವಾಗುತ್ತಿದೆ. ಮೋದಿ ಆಡಳಿತವು ಇಂತಹ ವಿಷಯಗಳಲ್ಲಿ ಸ್ಪಷ್ಟ ಹಾಗೂ ದೃಢ ನಿಲುವು ತಾಳಬೇಕಾದ ಸಂದರ್ಭದಲ್ಲಿ ಮೌನ ತಾಳಿತು. ವಿದೇಶಗಳಲ್ಲಿ ತಮ್ಮ ನಾಗರಿಕರ ಗೌರವ ಮತ್ತು ಹಕ್ಕುಗಳನ್ನು ಕಾಪಾಡುವುದು ಯಾವುದೇ ಸರ್ಕಾರದ ಮೂಲಭೂತ ಜವಾಬ್ದಾರಿಯಾಗಿದ್ದು, ಅವಮಾನಕಾರಿ ವರ್ತನೆ ಎದುರಾದಾಗ ಅದಕ್ಕೆ ತಕ್ಷಣ ಮತ್ತು ಖಡಕ್ ಪ್ರತಿಕ್ರಿಯೆ ನೀಡುವುದು ರಾಜತಾಂತ್ರಿಕ ದೌರ್ಬಲ್ಯವಲ್ಲ, ಬದಲಾಗಿ ರಾಷ್ಟ್ರ ಗೌರವವನ್ನು ಕಾಪಾಡುವ ಅಗತ್ಯ ಕ್ರಮ. ಆದರೆ ಆಗ ಸರ್ಕಾರದ ಸ್ಪಷ್ಟ ಪ್ರತಿಕ್ರಿಯೆ ಕಾಣಿಸಲಿಲ್ಲ.

ಭಾರತ ಮತ್ತು ಅಮೆರಿಕ ಸಂಬಂಧಗಳು ಇತಿಹಾಸದಲ್ಲೇ ಅತ್ಯಂತ ಗಟ್ಟಿಯಾಗಿವೆ ಎಂಬ ಹೇಳಿಕೆಗಳ ನಡುವೆ, ಅಲ್ಲಿನ ಅಧ್ಯಕ್ಷರಿಂದಲೇ ಅವಹೇಳನಕಾರಿ ಉಲ್ಲೇಖಗಳು ಹೊರಬರುತ್ತಿರುವುದು ಆ ಸಂಬಂಧಗಳ ನಿಜವಾದ ಬಲ ಮತ್ತು ಆಳವನ್ನು ಪ್ರಶ್ನೆಗೆ ಒಳಪಡಿಸುತ್ತದೆ. ರಾಜತಾಂತ್ರಿಕ ಸಂಬಂಧಗಳು ಕೇವಲ ಒಪ್ಪಂದಗಳು ಮತ್ತು ಭೇಟಿಗಳಿಂದ ಮಾತ್ರ ಬಲವಾಗುವುದಿಲ್ಲ, ಪರಸ್ಪರ ಗೌರವ ಮತ್ತು ಸಮಾನ ಮಾನ್ಯತೆಗಳೇ ಅವುಗಳ ಮೂಲ.

ಇಂಥ ಸಮಸ್ಯೆಗಳು ಒಂದೇ ದೇಶಕ್ಕೆ ಸೀಮಿತವಾಗಿಲ್ಲ. ಮಿತ್ರರಾಷ್ಟ್ರ ರಶಿಯಾ ಜೊತೆಗಿನ ಸಾಂಪ್ರದಾಯಿಕ ಸ್ನೇಹದ ತೂಕ ಕಡಿಮೆಯಾಗುತ್ತಿರುವ ಸೂಚನೆಗಳು ಕಾಣಿಸುತ್ತಿವೆ. ಮಧ್ಯಪೂರ್ವದ ಜಟಿಲ ಪರಿಸ್ಥಿತಿಯಲ್ಲಿ ಇರಾನ್ ಜೊತೆಗಿನ ಸಂಬಂಧಗಳಲ್ಲಿ ಸಮತೋಲನ ಸಾಧಿಸುವುದು ಕಷ್ಟಕರವಾಗಿದೆ. ಕೆನಡಾ ಜೊತೆಗಿನ ರಾಜತಾಂತ್ರಿಕ ತಳಮಳ ಬಹಿರಂಗವಾಗಿ ವ್ಯಕ್ತವಾಗಿದೆ. ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ಮುಂತಾದ ನೆರೆ ರಾಷ್ಟ್ರಗಳೊಂದಿಗೆ ಸಹ ಅಂತರ ಹೆಚ್ಚುತ್ತಿರುವುದು ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಭಾವ ಕುಂದುತ್ತಿರುವ ಸೂಚನೆಗಳಾಗಿ ಕಾಣಿಸುತ್ತಿದೆ. ಈ ಎಲ್ಲ ಬೆಳವಣಿಗೆಗಳು ಒಟ್ಟಾಗಿ ನೋಡಿದಾಗ ವಿದೇಶಾಂಗ ನೀತಿಯ ಸಮಗ್ರತೆಯ ಮೇಲೆಯೇ ಪ್ರಶ್ನೆ ಏಳುತ್ತದೆ.

ಇದರ ನಡುವೆ ಭಾರತದ ಇಂಧನ ರಾಜತಾಂತ್ರಿಕತೆಯಲ್ಲಿಯೂ ಹೊರಗಿನ ಒತ್ತಡಗಳ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಮೆರಿಕದ ನಿರ್ಬಂಧಗಳ ಹಿನ್ನೆಲೆಯಲ್ಲಿ ಭಾರತವು ಇರಾನ್‌ನಿಂದ ತೈಲ ಖರೀದಿಯನ್ನು ಕಡಿತಗೊಳಿಸಬೇಕಾದ ಪರಿಸ್ಥಿತಿ ಎದುರಿಸಿತು. ರಶಿಯಾದಿಂದ ತೈಲ ಖರೀದಿಯ ಮೇಲೂ ಜಾಗತಿಕ ಒತ್ತಡಗಳ ಪರಿಣಾಮ ಕಂಡುಬರುತ್ತಿದೆ. ಇಂತಹ ಬೆಳವಣಿಗೆಗಳು ಸ್ವತಂತ್ರ ವಿದೇಶಾಂಗ ಧೋರಣೆಯ ಬದಲಾಗಿ ಹೊರಗಿನ ಒತ್ತಡಗಳಿಗೆ ಹೊಂದಿಕೊಳ್ಳುವ ನೀತಿ ಮೇಲುಗೈ ಸಾಧಿಸುತ್ತಿದೆಯೇ ಎಂಬ ಪ್ರಶ್ನೆಯನ್ನು ಮುಂದಿಡುತ್ತದೆ.

ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಸಂಘರ್ಷದ ಬಗೆಗಿನ ಭಾರತದ ನಿಲುವು ಹಾಗೂ ಪ್ರಧಾನಿ ಮೋದಿ ಅವರು ಇಸ್ರೇಲ್ ಭೇಟಿಯ ವೇಳೆ ಬಳಸಿದ ಪದಪ್ರಯೋಗಗಳು ಸಹ ಚರ್ಚೆಗೆ ಗ್ರಾಸವಾಗಿವೆ. ಸಾಂಪ್ರದಾಯಿಕವಾಗಿ ಸಮತೋಲನ ಕಾಪಾಡಿಕೊಂಡು ಬಂದ ಭಾರತವು ಇತ್ತೀಚಿನ ವರ್ಷಗಳಲ್ಲಿ ಕೆಲವು ಸಂದರ್ಭಗಳಲ್ಲಿ ಸ್ಪಷ್ಟವಾದ ಬದ್ಧತೆ ತೋರಿಸುತ್ತಿಲ್ಲ. ಜಾಗತಿಕ ರಾಜಕೀಯದಲ್ಲಿ ಭಾವನಾತ್ಮಕ ಹೇಳಿಕೆಗಳಿಗಿಂತ ತೂಕದ, ಲೆಕ್ಕಾಚಾರದ ರಾಜತಾಂತ್ರಿಕತೆ ಅಗತ್ಯವಾಗಿದೆ.

ಇನ್ನೊಂದೆಡೆ, ಹೆಚ್ಚಿನ ಮಾಧ್ಯಮಗಳು ಮತ್ತು ಸರ್ಕಾರದ ಬೆಂಬಲಿಗರು ಸರ್ಕಾರದ ಸಾಧನೆಗಳನ್ನು ಉಲ್ಲೇಖಿಸುತ್ತಾರೆ. ಜಾಗತಿಕ ವೇದಿಕೆಯಲ್ಲಿ ಭಾರತದ ಹಾಜರಾತಿ ಹೆಚ್ಚಿದೆ, ಪ್ರಮುಖ ಒಪ್ಪಂದಗಳು ಕೈಗೂಡಿವೆ ಎಂದು ಅವರು ವಾದಿಸುತ್ತಾರೆ. ಆದರೆ ಈ ಸಾಧನೆಗಳು ನಿಜವಾಗಿ ದೇಶದ ಗೌರವವನ್ನು ಉಳಿಸಿ ಬಲಪಡಿಸುತ್ತಿವೆಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಕಾಣಿಸುತ್ತಿಲ್ಲ. ಪ್ರಚಾರ ಮತ್ತು ವಾಸ್ತವಿಕತೆಯ ನಡುವಿನ ಅಂತರ ಹೆಚ್ಚುತ್ತಿರುವುದು ಈ ಸಂದೇಹವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ಭಾರತದ ಸ್ವಾತಂತ್ರ್ಯೋತ್ತರ ಇತಿಹಾಸವನ್ನು ಗಮನಿಸಿದರೆ, ಜಗತ್ತಿನಲ್ಲಿ ನಮ್ಮ ದೇಶಕ್ಕೆ ವಿಶಿಷ್ಟ ಸ್ಥಾನವಿದೆ. ಅಹಿಂಸೆಯ ತತ್ವ, ಪ್ರಜಾಪ್ರಭುತ್ವದ ಬಲ, ಅಲಿಪ್ತ ಚಳವಳಿಯ ಸಮತೋಲನ ಹಾಗೂ ವಿಶ್ವದಾದ್ಯಂತ ತನ್ನ ಸಾಮರ್ಥ್ಯ ತೋರಿದ ಅಪಾರ ಮಾನವ ಸಂಪನ್ಮೂಲಗಳ ಸಮನ್ವಯದಿಂದ ಭಾರತಕ್ಕೆ ವಿಶಿಷ್ಠ ಗೌರವ, ಮನ್ನಣೆ ಸಿಕ್ಕಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಆ ಗೌರವದ ಆಧಾರಶಿಲೆಗಳು ನಿಧಾನವಾಗಿ ಕುಸಿಯುತ್ತಿವೆಯೇ ಎಂಬ ಆತಂಕ ವ್ಯಕ್ತವಾಗುತ್ತಿದೆ.

ಒಟ್ಟಾರೆ, ಅಮೆರಿಕದ ಅಧ್ಯಕ್ಷರ ಹೇಳಿಕೆಗಳನ್ನು ಕೇವಲ ಒಬ್ಬ ವ್ಯಕ್ತಿಯ ಮಾತು ಎಂದು ತಳ್ಳಿಹಾಕಲು ಸಾಧ್ಯವಿಲ್ಲ. ಇದು ಭಾರತದ ವಿದೇಶಾಂಗ ನೀತಿಯ ಸ್ಥಿತಿಗತಿಗಳನ್ನು ಮರುಪರಿಶೀಲಿಸಲು ಒತ್ತಾಯಿಸುವ ಘಟನೆ. ಜಾಗತಿಕ ವೇದಿಕೆಯಲ್ಲಿ ಗೌರವ ಗಳಿಸುವುದು ಒಂದು ಹಂತವಾದರೆ, ಅದನ್ನು ನಿರಂತರವಾಗಿ ಉಳಿಸಿಕೊಳ್ಳುವುದು ಇನ್ನಷ್ಟು ದೊಡ್ಡ ಸವಾಲು. ಸ್ವಾತಂತ್ರ್ಯ ನಂತರ ಕಟ್ಟಿಕೊಂಡ ಭಾರತದ ಪ್ರತಿಷ್ಠೆ ಇಂದು ಕಠಿಣ ಪರೀಕ್ಷೆಯನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಇದಕ್ಕೆ ಸರಿಯಾದ ದಿಕ್ಕು ತೋರಿಸದಿದ್ದರೆ ಭವಿಷ್ಯದಲ್ಲಿ ಇನ್ನಷ್ಟು ಸವಾಲುಗಳು ಎದುರಾಗುವ ಸಾಧ್ಯತೆ ಇದೆ.

WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST