LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureEditorialBeautyRecipes

ಜೀವ ಕಳೆದುಕೊಂಡ ನಾವಿಕರು, ಧ್ವನಿ ಕಳೆದುಕೊಂಡ ನಾಯಕತ್ವ

ಜೂನ್ 9, 10 ಮತ್ತು 11ರಂದು ಒಮಾನ್ ಸಮೀಪ ಭಾರತೀಯ ನಾವಿಕರು ಕರ್ತವ್ಯ ನಿರ್ವಹಿಸುತ್ತಿದ್ದ ಮೂರು ವಾಣಿಜ್ಯ ಹಡಗುಗಳು ಯುದ್ಧಪ್ರೇಮಿ ಅಮೆರಿಕದ ದಾಳಿಗೆ ಒಳಗಾದವು. ಈ ದಾಳಿಗಳಲ್ಲಿ ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿರುವುದು ದೇಶದಾದ್ಯಂತ ಆಘಾತ ಮೂಡಿಸಿದೆ. ಭಾರತೀಯರು ಇದ್ದ ಹಡಗುಗಳ ಮೇಲೆ ಸತತ ಮೂರು ದಿನ ನಡೆದ ದಾಳಿಗಳು ಮತ್ತು ಅದರ ಪರಿಣಾಮವಾಗಿ ಸಂಭವಿಸಿದ ಜೀವಹಾನಿ ಹಲವು ಗಂಭೀರ ಪ್ರಶ್ನೆಗಳನ್ನು ಎತ್ತಿವೆ.

ಒಂದು ದೇಶದ ನಿಜವಾದ ಶಕ್ತಿಯನ್ನು ಅದರ ಸೈನ್ಯ ಅಥವಾ ಆರ್ಥಿಕತೆಯಿಂದ ಮಾತ್ರ ಅಳೆಯಲಾಗುವುದಿಲ್ಲ. ತನ್ನ ಪ್ರಜೆಗಳ ಜೀವಕ್ಕೆ ಅದು ಎಷ್ಟು ಬೆಲೆ ಕೊಡುತ್ತದೆ ಎಂಬುದೇ ಅದರ ದೊಡ್ಡ ಮಾನದಂಡ. ಒಮಾನ್ ಸಮೀಪ ನಡೆದ ಈ ದಾಳಿಗಳು ಮತ್ತು ಭಾರತೀಯ ನಾವಿಕರ ಸಾವು ಇದೇ ಪ್ರಶ್ನೆಯನ್ನು ದೇಶದ ಮುಂದಿಟ್ಟಿದೆ. ಸಾವಿರಾರು ಕಿಲೋಮೀಟರ್ ದೂರದ ಸಮುದ್ರದಲ್ಲಿ ತಮ್ಮ ಕುಟುಂಬಗಳ ಕನಸುಗಳನ್ನು ಹೊತ್ತು ದುಡಿಯುತ್ತಿದ್ದ ಭಾರತೀಯರು ಕ್ಷಣಾರ್ಧದಲ್ಲಿ ಜೀವ ಕಳೆದುಕೊಂಡಿದ್ದಾರೆ. ಆದರೆ ಈ ದುರಂತದ ಬಳಿಕ ದೇಶದ ಅತ್ಯುನ್ನತ ನಾಯಕತ್ವದಿಂದ ಸ್ಪಷ್ಟ ಮತ್ತು ದೃಢವಾದ ಧ್ವನಿ ಕೇಳಿಬಂದಿಲ್ಲ. ಇದು ಕೇವಲ ರಾಜತಾಂತ್ರಿಕ ಘಟನೆ ಅಲ್ಲ; ಭಾರತೀಯರ ಜೀವದ ಪ್ರಶ್ನೆ.

ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರ ರಕ್ಷಣೆಯ ವಿಚಾರ ಬಂದಾಗ ಕೇಂದ್ರ ಸರ್ಕಾರ ತನ್ನ ಸಾಧನೆಗಳನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ವಿದೇಶಗಳಿಂದ ನಾಗರಿಕರನ್ನು ಕರೆತಂದ ಕಾರ್ಯಾಚರಣೆಗಳನ್ನು ಯಶಸ್ಸಾಗಿ ಬಿಂಬಿಸುತ್ತದೆ. ಆದರೆ ಭಾರತೀಯರು ಪ್ರಾಣ ಕಳೆದುಕೊಂಡಾಗ ಅದೇ ಕಾಳಜಿ ಮತ್ತು ದೃಢತೆ ಏಕೆ ಕಾಣಿಸುತ್ತಿಲ್ಲ? ಪ್ರತಿಯೊಂದು ವಿಷಯಕ್ಕೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸುವ ನಾಯಕತ್ವವು ಭಾರತೀಯ ನಾವಿಕರ ಸಾವಿನಂತಹ ಗಂಭೀರ ಘಟನೆಯಲ್ಲಿ ಅಧಿಕಾರಿಗಳಿಂದ ಒಂದೆರಡು ಪತ್ರಿಕಾಗೋಷ್ಠಿ ನಡೆಸಿ ಅಮೆರಿಕಕ್ಕೆ ನೇರವಾಗಿ ಪ್ರಶ್ನಿಸದಿರುವುದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ದೇಶದ ಪ್ರಜೆಗಳ ಜೀವಹಾನಿಯ ಸಂದರ್ಭದಲ್ಲಿಯೂ ಸಹ ನಾಯಕತ್ವದ ಧ್ವನಿ ಕೇಳಿಸದಿರುವುದು ನೋವಿನ ಸಂಗತಿ. ಇದಕ್ಕಿಂತಲೂ ಬೇಸರದ ಸಂಗತಿ ಗೋದಿ ಮಾಧ್ಯಮಗಳ ವರ್ತನೆ. ದೇಶದ ನಾಗರಿಕರು ಅಮೆರಿಕದ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿರುವುದು ರಾಷ್ಟ್ರೀಯ ಚರ್ಚೆಯ ಕೇಂದ್ರವಾಗಬೇಕಾದ ವಿಷಯ. ಆದರೆ ಹೆಚ್ಚಿನ ಪ್ರಮುಖ ವಾಹಿನಿಗಳು ಮತ್ತು ಮಾಧ್ಯಮ ಸಂಸ್ಥೆಗಳು ಈ ವಿಷಯವನ್ನು ನಿರೀಕ್ಷಿತ ರೀತಿಯಲ್ಲಿ ಮುಂದಿಟ್ಟಿಲ್ಲ. ಜನರ ಧ್ವನಿಯಾಗಬೇಕಿದ್ದ ಮಾಧ್ಯಮಗಳು ಸರ್ಕಾರದ ವಕ್ತಾರರಂತೆ ಕೆಲಸ ಮಾಡುತ್ತಿರುವುದು ಪ್ರಜಾಪ್ರಭುತ್ವದ ದುರಂತವೇ ಸರಿ. ಅಧಿಕಾರದಲ್ಲಿರುವವರನ್ನು ಪ್ರಶ್ನಿಸಬೇಕಾದವರು ಅವರ ಗುಣಗಾನದಲ್ಲೇ ತೊಡಗಿರುವುದು ಪತ್ರಿಕೋದ್ಯಮಕ್ಕೆ ಮಾಡುವ ಅಪಚಾರ.

ಈ ಘಟನೆ ಕೇವಲ ಕೆಲವು ಭಾರತೀಯ ನಾವಿಕರ ಸಾವಿನ ಪ್ರಶ್ನೆಯಲ್ಲ. ಜಗತ್ತಿನ ಮೂಲೆ ಮೂಲೆಗಳಲ್ಲಿ ತನ್ನ ಗೂಂಡಾಗಿರಿ ನಡೆಸುವಮೇರಿಕದ ದಬ್ಬಾಳಿಕೆಯ ವಿದೇಶಾಂಗ ನೀತಿಯ ಪ್ರಶ್ನೆಯೂ ಹೌದು. ಪ್ಯಾಲೆಸ್ತೀನ, ಇರಾಕ್, ಅಫ್ಘಾನಿಸ್ತಾನ, ಲಿಬಿಯಾ, ಸಿರಿಯಾ, ವೆನೆಜುವೆಲಾ, ಲೆಬನಾನ್ ಮತ್ತು ಇರಾನ್ ಸೇರಿದಂತೆ ಹಲವು ದೇಶಗಳಲ್ಲಿ ನಡೆದ ಸೇನಾ ಹಸ್ತಕ್ಷೇಪಗಳು ಲಕ್ಷಾಂತರ ಜನರ ಪ್ರಾಣಹರಣ ಮಾಡಿವೆ, ಕೋಟ್ಯಾಂತರ ಜನರ ಬದುಕನ್ನು ಹಾಳು ಮಾಡಿವೆ. ಜಾಗತಿಕ ಪೊಲೀಸ್‌ನಂತೆ ವರ್ತಿಸುವ ಅಮೆರಿಕ ತನ್ನ ಹಿತಾಸಕ್ತಿಗಳ ಹೆಸರಿನಲ್ಲಿ ಅಂತರರಾಷ್ಟ್ರೀಯ ಕಾನೂನು ಮತ್ತು ಮಾನವೀಯ ಮೌಲ್ಯಗಳನ್ನು ಗಾಳಿಗೆ ತೂರಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಅಮೆರಿಕದ ಓರ್ವ ನಾಗರಿಕನ ಜೀವಕ್ಕೆ ಅಪಾಯ ಎದುರಾದರೂ ವಾಷಿಂಗ್ಟನ್ ದಿಟ್ಟ ಧ್ವನಿ ಎತ್ತುತ್ತದೆ. ಆದರೆ ಅಮೇರಿಕದ ದಬ್ಬಾಳಿಕೆಗೆ ಇತರ ದೇಶಗಳ ನಾಗರಿಕರು ಬಲಿಯಾದಾಗ ಆ ಜೀವಗಳಿಗೆ ಬೆಲೆಯೇ ಇಲ್ಲ. ಭಾರತೀಯ ನಾವಿಕರ ಸಾವಿನ ಘಟನೆಯೂ ಇದೇ ಪ್ರಶ್ನೆಯನ್ನು ಮತ್ತೆ ಮುಂದಿಟ್ಟಿದೆ.

2013ರಲ್ಲಿ ಅಮೆರಿಕದಲ್ಲಿ ಭಾರತೀಯ ರಾಜತಾಂತ್ರಿಕೆ ದೇವಯಾನಿ ಖೋಬ್ರಾಗಡೆ ಅವರನ್ನು ಬಂಧಿಸಿ ಅವಮಾನಿಸಿದ ಸಂದರ್ಭದಲ್ಲಿ ಆಗಿನ ಪ್ರಧಾನಿ ಡಾ. ಮನಮೋಹನ್‌ ಸಿಂಗ್ ನೇತೃತ್ವದ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಭಾರತದಲ್ಲಿ ಅಮೆರಿಕ ರಾಯಭಾರ ಕಚೇರಿಗೆ ನೀಡಲಾಗಿದ್ದ ಭದ್ರತೆ ಮತ್ತು ಇತರ ಸೌಲಭ್ಯಗಳನ್ನು ಹಿಂಪಡೆಯಲಾಗಿತ್ತು. ಆಗ ಭಾರತದ ಅಸಮಾಧಾನವನ್ನು ಸ್ಪಷ್ಟವಾಗಿ ವಾಷಿಂಗ್ಟನ್‌ಗೆ ತಿಳಿಸಲಾಗಿತ್ತು. ಒಬ್ಬ ಭಾರತೀಯ ರಾಜತಾಂತ್ರಿಕೆಯ ಗೌರವದ ಪ್ರಶ್ನೆ ಬಂದಾಗ ಭಾರತ ತನ್ನ ನಿಲುವನ್ನು ದೃಢವಾಗಿ ವ್ಯಕ್ತಪಡಿಸಿತ್ತು. ಆಗ ಅಮೆರಿಕ ಕ್ಷಮೆಯಾಚಿಸಿದಾಗ ಈ ಘಟನೆ ಕೊನೆಗೊಂಡಿತ್ತು. ಆದರೆ ಇಂದು ಭಾರತೀಯರಿಗೆ ಅವಮಾನ ಮಾಡಿದಾಗ ಮತ್ತು ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿರುವಂತಹ ಗಂಭೀರ ಘಟನೆಯಲ್ಲೂ ಆ ರೀತಿಯ ದೃಢತೆ ಮತ್ತು ಸ್ಪಷ್ಟತೆ ಕಾಣಿಸುತ್ತಿದೆಯೇ ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.

ಭಾರತ ಇಂದು ವಿಶ್ವಗುರು, ವಿಶ್ವಶಕ್ತಿ ಮತ್ತು ಜಾಗತಿಕ ನಾಯಕತ್ವದ ಬಗ್ಗೆಯೇ ಮಾತನಾಡುತ್ತಿದೆ. ಆದರೆ ವಿಶ್ವಶಕ್ತಿಯಾಗುವುದೆಂದರೆ ಕೇವಲ ದೊಡ್ಡ ಭಾಷಣಗಳನ್ನು ಮಾಡುವುದು ಅಲ್ಲ. ತನ್ನ ಪ್ರಜೆಗಳ ಜೀವಕ್ಕೆ ಧಕ್ಕೆ ಬಂದಾಗ ಯಾವುದೇ ದೇಶದ ಎದುರು ತಲೆ ಎತ್ತಿ ಪ್ರಶ್ನೆ ಕೇಳುವ ಧೈರ್ಯ ಹೊಂದಿರುವುದೇ ನಿಜವಾದ ನಾಯಕತ್ವ.

ಒಬ್ಬ ಭಾರತೀಯ ನಾಗರಿಕನ ಜೀವ ಜಗತ್ತಿನ ಯಾವುದೇ ನಾಗರಿಕನ ಜೀವಕ್ಕಿಂತ ಕಡಿಮೆ ಮೌಲ್ಯದ್ದಲ್ಲ. ಅಮೆರಿಕದಿಂದ ಕೇವಲ ವಿವರಣೆ ಕೇಳುವುದರಿಂದ ಸಾಲದು. ಸಂಪೂರ್ಣ ತನಿಖೆ, ಹೊಣೆಗಾರರ ಉತ್ತರದಾಯಿತ್ವ ಮತ್ತು ಭವಿಷ್ಯದಲ್ಲಿ ವಿಶ್ವದ ವಿವಿಧ ಸಮುದ್ರ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 3 ಲಕ್ಷಕ್ಕೂ ಹೆಚ್ಚು ಭಾರತೀಯ ನಾವಿಕರ ಸುರಕ್ಷತೆಗಾಗಿ ಸ್ಪಷ್ಟ ಕ್ರಮ ಕೈಗೊಳ್ಳಲು ಭಾರತ ಒತ್ತಾಯಿಸಬೇಕು. ತನ್ನ ಪ್ರಜೆಗಳ ರಕ್ತ ಸುರಿದಾಗಲೂ ಮೌನವಾಗಿರುವ ರಾಷ್ಟ್ರವನ್ನು ಜಗತ್ತು ಶಕ್ತಿಶಾಲಿ ರಾಷ್ಟ್ರವಾಗಿ ಅಲ್ಲ, ದುರ್ಬಲ ರಾಷ್ಟ್ರವಾಗಿ ನೋಡುತ್ತದೆ ಎಂಬ ಸತ್ಯವನ್ನು ಸರಕಾರ ಮರೆಯಬಾರದು.

Author
A B Dharwadkar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜೀವ ಕಳೆದುಕೊಂಡ ನಾವಿಕರು, ಧ್ವನಿ ಕಳೆದುಕೊಂಡ ನಾಯಕತ್ವಕಾಗದದ ಕಡತಗಳಿಗೆ ವಿದಾಯ: ಪಾಲಿಕೆ ಪಿಐಡಿ ಸೇವೆ ಸಂಪೂರ್ಣ ಆನ್‌ಲೈನ್‌ಗೆಮಾಡೆಲ್ ಲಗೇಜ್‌ನಲ್ಲಿ 11.82 ಕೋಟಿ ರೂ. ಮೌಲ್ಯದ ಗಾಂಜಾ ಪತ್ತೆಕಿವೀಸ್ ಕ್ರಿಕೆಟ್‌ನ ಸುವರ್ಣ ಅಧ್ಯಾಯ ಅಂತ್ಯ; ವಿಲಿಯಮ್ಸನ್ ನಿವೃತ್ತಿನಿನ್ನೆ ಇಸ್ರೇಲ್‌ ದಾಳಿಗೆ ಬೆಂಬಲ, ಇಂದು ಪುತ್ರನಿಗಾಗಿ ಕಣ್ಣೀರು: ಹಳೆಯ ಪೋಸ್ಟಗಳು ವೈರಲ್!ಮಾವಿನ ಹಣ್ಣು ಸೇವಿಸಿ ಬೀದರ ಮೂಲದ ಇಬ್ಬರು ಸಹೋದರಿಯರ ಸಾವುಕರ್ನಾಟಕದ ನೀರಿನ ಹಕ್ಕಿಗೆ ದೆಹಲಿಯಲ್ಲಿ ಧ್ವನಿ : ಕೃಷ್ಣಾ ತೀರ್ಪಿನಿಂದ ಮಹದಾಯಿ ತನಕ ಬಾಕಿ ಬೇಡಿಕೆಗಳಿಗೆ ವೇಗ ನೀಡುವಂತೆ ಒತ್ತಾಯಧರ್ಮಸ್ಥಳ ವಿಚಾರದಲ್ಲಿ ದೊಡ್ಡ ಷಡ್ಯಂತ್ರ: ವಿಜಯೇಂದ್ರ ಆರೋಪಇವಿಎಂಗಳ ಭಸ್ಮ : ಕೋಲ್ಕತ್ತಾ ಕಟ್ಟಡ ಅಗ್ನಿ ಅವಘಡದ ಹಿಂದೆ ಸಂಚು ಶಂಕೆಕಾನೂನಿನ ಭಯ ಮಾಯವೇ? ರಸ್ತೆಯಲ್ಲಿ ಉಗುಳಬೇಡಿ ಎಂದ ವೃದ್ಧನಿಗೆ ಅಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆ