ಬೆಲ್ಜಿಯಂ ಮೂಲದ ಹಾಲ್ಜೆನ್ ಅಮೆರಿಕದ ವಿಸ್ಕಾನ್ಸಿನ್–ಮ್ಯಾಡಿಸನ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದು, ಐಸ್‌ಕ್ಯೂಬ್ ನ್ಯೂಟ್ರಿನೋ ವೀಕ್ಷಣಾಲಯದ ಪ್ರಧಾನ ಸಂಶೋಧಕರಾಗಿದ್ದಾರೆ. ದಕ್ಷಿಣ ಧ್ರುವದ ಮಂಜುಗಡ್ಡೆಯನ್ನೇ ನ್ಯೂಟ್ರಿನೋ ಎಂಬ ಅತಿ ಸೂಕ್ಷ್ಮ ಕಣಗಳನ್ನು ಪತ್ತೆಹಚ್ಚುವ ಸಾಧನವಾಗಿ ಬಳಸಬಹುದು ಎಂಬ ವೈಜ್ಞಾನಿಕ ಪರಿಕಲ್ಪನೆಯನ್ನು ಅವರು ಮುಂದಿಟ್ಟಿದ್ದರು. ಅವರ ವೈಜ್ಞಾನಿಕ ದೃಷ್ಟಿಕೋನ ಮತ್ತು ನಾಯಕತ್ವ ಐಸ್‌ಕ್ಯೂಬ್ ನಿರ್ಮಾಣದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.
ಸುಮಾರು ಒಂದು ಘನ ಕಿಲೋಮೀಟರ್ ಅಂಟಾರ್ಕ್ಟಿಕ್ ಮಂಜುಗಡ್ಡೆಯೊಳಗೆ ಸಾವಿರಾರು ಬೆಳಕಿನ ಸಂವೇದಕಗಳನ್ನು ಅಳವಡಿಸಿರುವ ಐಸ್‌ಕ್ಯೂಬ್ ಮೂಲಕ ದೂರದ ಬ್ರಹ್ಮಾಂಡದ ಅತ್ಯಂತ ಶಕ್ತಿಶಾಲಿ ಪ್ರಕ್ರಿಯೆಗಳಿಂದ ಹೊರಹೊಮ್ಮುವ ಅಧಿಕ ಶಕ್ತಿಯ ನ್ಯೂಟ್ರಿನೋಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದೆ. ನ್ಯೂಟ್ರಿನೋಗಳು ಪರಮಾಣು ನ್ಯೂಕ್ಲಿಯಸ್‌ನೊಂದಿಗೆ ಅಪರೂಪವಾಗಿ ಸಂವಹನ ನಡೆಸಿದಾಗ ಉಂಟಾಗುವ ಅತಿ ಕ್ಷೀಣ ಬೆಳಕನ್ನು ಈ ಸಂವೇದಕಗಳು ದಾಖಲಿಸುತ್ತವೆ.
ಐಸ್‌ಕ್ಯೂಬ್ ನಿರಂತರವಾಗಿ ದಾಖಲಿಸುವ ನ್ಯೂಟ್ರಿನೋ ಸಂವಹನಗಳು ಅಧಿಕ ಶಕ್ತಿಯ ಕಣಗಳು ಹುಟ್ಟುವ ಬ್ರಹ್ಮಾಂಡದ ಅತ್ಯಂತ ತೀವ್ರ ಪರಿಸರಗಳ ಬಗ್ಗೆ ಹೊಸ ಮಾಹಿತಿ ನೀಡುತ್ತಿವೆ. ಇದರಿಂದ ಈವರೆಗೆ ತಿಳಿದಿರದ ಕಾಸ್ಮಿಕ್ ವಿದ್ಯಮಾನಗಳನ್ನೂ ಪತ್ತೆಹಚ್ಚುವ ಸಾಧ್ಯತೆ ಇದೆ. ಹಾಲ್ಜೆನ್ ಅವರ ಸಾಧನೆ ‘ಹೊಸ ಬಗೆಯ ಖಗೋಳ ವಿಜ್ಞಾನಕ್ಕೆ ದಾರಿ ತೆರೆದಿದೆ’ ಎಂದು ನೊಬೆಲ್ ಸಮಿತಿ ಹೇಳಿದೆ.
2026ರ ನೊಬೆಲ್ ಪ್ರಶಸ್ತಿಯ ಮೊತ್ತ 1.2 ಕೋಟಿ ಸ್ವೀಡಿಷ್ ಕ್ರೋನರ್ ಆಗಿದೆ.
2025ರಲ್ಲಿ ಮೂವರಿಗೆ ಪ್ರಶಸ್ತಿ: ಕಳೆದ ವರ್ಷದ ಭೌತಶಾಸ್ತ್ರ ನೊಬೆಲ್ ಅನ್ನು ಜಾನ್ ಕ್ಲಾರ್ಕ್, ಮೈಕೆಲ್ ಎಚ್. ಡೆವೊರೆಟ್ ಮತ್ತು ಜಾನ್ ಎಂ. ಮಾರ್ಟಿನಿಸ್ ಅವರಿಗೆ ವಿದ್ಯುತ್ ಸರ್ಕ್ಯೂಟ್‌ನಲ್ಲಿ ಮ್ಯಾಕ್ರೋಸ್ಕೋಪಿಕ್ ಕ್ವಾಂಟಮ್ ಮೆಕ್ಯಾನಿಕಲ್ ಟನೆಲಿಂಗ್ ಹಾಗೂ ಶಕ್ತಿಯ ಕ್ವಾಂಟೀಕರಣದ ಆವಿಷ್ಕಾರಕ್ಕಾಗಿ ನೀಡಲಾಗಿತ್ತು.