LIVE TV LocalCrimeNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes
International News

ಯುಎಇ ಸೇರಿ 5 ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಪ್ರವಾಸ

ಹೊಸದಿಲ್ಲಿ, ಮೇ 15 : ಪ್ರಸ್ತುತ ಜಾಗತಿಕ ಭೌಗೋಳಿಕ ರಾಜಕೀಯ ಬೆಳವಣಿಗೆಗಳ ನಡುವೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ (ಯುಎಇ), ನೆದರ್ಲ್ಯಾಂಡ್ಸ್‌, ಸ್ವೀಡನ್‌, ನಾರ್ವೆ ಹಾಗೂ ಇಟಲಿಗೆ 6 ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಇಂಧನ ಪೂರೈಕೆಯನ್ನು ಭದ್ರಪಡಿಸುವುದು, ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಉಂಟಾಗಿರುವ ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುವುದು ಹಾಗೂ ನಿರ್ಣಾಯಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಸುವುದು ಈ ಪ್ರವಾಸದ ಪ್ರಮುಖ ಉದ್ದೇಶಗಳಾಗಿವೆ ಎಂದು ತಿಳಿದು ಬಂದಿದೆ.

ಮುಂದಿನ 6 ದಿನಗಳಲ್ಲಿ ಹಲವು ರಾಷ್ಟ್ರಗಳ ನಾಯಕರೊಂದಿಗೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ ನಡೆಸಲಿದ್ದು, ಭಾರತದ ಜಾಗತಿಕ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ತಿಳಿಸಿದ್ದಾರೆ.

ಪ್ರಧಾನಿ ಮೋದಿ ಅವರ ಮೊದಲ ತಾಣ ಯುಎಇ ಆಗಿದ್ದು, ಅಲ್ಲಿ ಅಧ್ಯಕ್ಷ ಶೇಖ್‌ ಮೊಹಮ್ಮದ್‌ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌ ಅವರೊಂದಿಗೆ ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಕುರಿತು ಚರ್ಚೆ ನಡೆಸಲಿದ್ದಾರೆ. ಜೊತೆಗೆ ಪಶ್ಚಿಮ ಏಷ್ಯಾ ಸಂಘರ್ಷದ ಬೆಳವಣಿಗೆಗಳ ಕುರಿತು ಉಭಯ ನಾಯಕರು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ.

ಪ್ರಧಾನಿ ಸುಮಾರು 4 ಗಂಟೆಗಳ ಕಾಲ ಯುಎಇಯಲ್ಲಿ ತಂಗಲಿದ್ದು, ಬಳಿಕ ಯುರೋಪ್‌ ಪ್ರವಾಸ ಮುಂದುವರಿಸಲಿದ್ದಾರೆ. ಮೋದಿ-ಅಲ್‌ ನಹ್ಯಾನ್‌ ಮಾತುಕತೆ ಬಳಿಕ ದ್ರವೀಕೃತ ಪೆಟ್ರೋಲಿಯಂ ಅನಿಲ ಹಾಗೂ ಕಾರ್ಯತಂತ್ರದ ಪೆಟ್ರೋಲಿಯಂ ಸಂಗ್ರಹಣೆಗೆ ಸಂಬಂಧಿಸಿದಂತೆ ಎರಡು ಮಹತ್ವದ ಒಪ್ಪಂದಗಳಿಗೆ ಸಹಿ ಬೀಳುವ ನಿರೀಕ್ಷೆಯಿದೆ.

ಟೆಹರಾನ್‌ನ ಹಾರ್ಮುಜ್‌ ಜಲಸಂಧಿ ದಿಗ್ಬಂಧನದ ಹಿನ್ನೆಲೆ ಅಮೆರಿಕ ಹಾಗೂ ಇರಾನ್‌ ನಡುವಿನ ಉದ್ವಿಗ್ನತೆ ಹೆಚ್ಚಿದ್ದು, ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ವಿಶ್ವದ ಒಟ್ಟು ಪೆಟ್ರೋಲಿಯಂ ಪೂರೈಕೆಯ ಸುಮಾರು ಶೇ.20ರಷ್ಟು ಈ ಮಾರ್ಗದ ಮೂಲಕ ಸಾಗುವುದರಿಂದ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಪ್ರಧಾನಿ ಮೋದಿ ಹಾಗೂ ಅಲ್‌ ನಹ್ಯಾನ್‌ ಉಭಯ ರಾಷ್ಟ್ರಗಳ ವ್ಯಾಪಾರ ಹಾಗೂ ಹೂಡಿಕೆ ಸಂಬಂಧಗಳ ಬಲವರ್ಧನೆ ಕುರಿತೂ ಚರ್ಚಿಸಲಿದ್ದಾರೆ. ಯುಎಇ ಭಾರತಕ್ಕೆ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ಕಳೆದ 25 ವರ್ಷಗಳಲ್ಲಿ ಭಾರತದ 7ನೇ ಅತಿದೊಡ್ಡ ಹೂಡಿಕೆ ಮೂಲವಾಗಿದೆ.

ಯುಎಇಯಲ್ಲಿ 45 ಲಕ್ಷಕ್ಕೂ ಅಧಿಕ ಭಾರತೀಯರು ನೆಲೆಸಿರುವ ಹಿನ್ನೆಲೆಯಲ್ಲಿ ಅವರ ಕಲ್ಯಾಣದ ವಿಷಯಗಳೂ ಮಾತುಕತೆಯಲ್ಲಿ ಪ್ರಸ್ತಾಪವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರವಾಸದ ಎರಡನೇ ಹಂತದಲ್ಲಿ ಪ್ರಧಾನಿ ಮೋದಿ ಮೇ 15ರಿಂದ 17ರವರೆಗೆ ನೆದರ್ಲ್ಯಾಂಡ್ಸ್‌ಗೆ ಭೇಟಿ ನೀಡಲಿದ್ದಾರೆ. 2017ರ ಬಳಿಕ ಇದು ಅವರ ಎರಡನೇ ನೆದರ್ಲ್ಯಾಂಡ್ಸ್‌ ಪ್ರವಾಸವಾಗಲಿದೆ.

ಅಲ್ಲಿ ರಾಜ ವಿಲ್ಲೆಮ್‌-ಅಲೆಕ್ಸಾಂಡರ್‌, ರಾಣಿ ಮ್ಯಾಕ್ಸಿಮಾ ಹಾಗೂ ಪ್ರಧಾನಿ ರಾಬ್‌ ಜೆಟ್ಟನ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಭಾರತ-ನೆದರ್ಲ್ಯಾಂಡ್ಸ್‌ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ಈ ಭೇಟಿ ಅವಕಾಶ ಕಲ್ಪಿಸಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

2024-25ರಲ್ಲಿ ಭಾರತ-ನೆದರ್ಲ್ಯಾಂಡ್ಸ್‌ ನಡುವಿನ ದ್ವಿಪಕ್ಷೀಯ ವ್ಯಾಪಾರ ಮೌಲ್ಯ 27.8 ಶತಕೋಟಿ ಡಾಲರ್‌ ತಲುಪಿದ್ದು, ಯುರೋಪ್‌ನಲ್ಲಿ ಭಾರತದ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳಲ್ಲಿ ನೆದರ್ಲ್ಯಾಂಡ್ಸ್‌ ಒಂದಾಗಿದೆ.

ರಕ್ಷಣೆ, ಭದ್ರತೆ, ಹಸಿರು ಹೈಡ್ರೋಜನ್‌, ಅರೆವಾಹಕ, ನಾವೀನ್ಯತೆ ಹಾಗೂ ಜಲ ನಿರ್ವಹಣೆ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆ ಕುರಿತು ಚರ್ಚೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೆದರ್ಲ್ಯಾಂಡ್ಸ್‌ನಿಂದ ಪ್ರಧಾನಿ ಮೋದಿ ಮೇ 17ರಿಂದ 18ರವರೆಗೆ ಸ್ವೀಡನ್‌ಗೆ ಭೇಟಿ ನೀಡಲಿದ್ದಾರೆ. ಸ್ವೀಡನ್‌ ಪ್ರಧಾನಿ ಉಲ್ಫ್‌ ಕ್ರಿಸ್ಟರ್ಸನ್‌ ಆಹ್ವಾನದ ಮೇರೆಗೆ ಈ ಭೇಟಿ ನಡೆಯುತ್ತಿದೆ.

2018ರಲ್ಲಿ ನಡೆದ ಮೊದಲ ಭಾರತ-ನಾರ್ಡಿಕ್‌ ಶೃಂಗಸಭೆ ವೇಳೆ ಮೋದಿ ಸ್ವೀಡನ್‌ಗೆ ಭೇಟಿ ನೀಡಿದ್ದರು. 2025ರಲ್ಲಿ ಭಾರತ-ಸ್ವೀಡನ್‌ ದ್ವಿಪಕ್ಷೀಯ ವ್ಯಾಪಾರ ಮೌಲ್ಯ 7.75 ಶತಕೋಟಿ ಡಾಲರ್‌ಗೆ ತಲುಪಿದ್ದು, ಹೊಸ ಸಹಕಾರ ಅವಕಾಶಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಲಿದ್ದಾರೆ.

 

 

Author
Samadarshi News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಗಣೇಶ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ ಕಲ್ಲುತೂರಾಟ ಆರೋಪಯುಪಿಐ ಶುಲ್ಕಕ್ಕೆ ಅಖಿಲೇಶ ಯಾದವ ಆಕ್ರೋಶದೇಶದ ಇಂಧನ ಭದ್ರತೆ ಕಾಪಾಡಲು ಬದ್ಧಈಶ್ವರಪ್ಪ, ಯತ್ನಾಳ ಅವರನ್ನು ಬಿಜೆಪಿಗೆ ಮರಳಿ ಕರೆತರಬೇಕು: ನಿರಾಣಿ₹50 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಧಾರವಾಡ ತಹಶೀಲ್ದಾರಜಾಗತಿಕ ಚಿಪ್ ಉತ್ಪಾದನೆಯ ವಿಶ್ವಾಸಾರ್ಹ ಕೇಂದ್ರವಾಗುತ್ತಿದೆ ಭಾರತ: ಮೋದಿಬರಪೀಡಿತ ಪಟ್ಟಿಗೆ ಮತ್ತೂ 23 ತಾಲೂಕು; ಒಟ್ಟು 124ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರುಗನ್ ತೋರಿಸಿ ಬೆದರಿಸಿ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ: ಮಾಜಿ ಶಾಸಕ ಸೇರಿ ಇಬ್ಬರ ವಿರುದ್ಧ ಪ್ರಕರಣಸಮಾಜದ ಜಟಿಲ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಮುಂದಾಗಲಿ: ಡಾ. ಅಲ್ಲಮಪ್ರಭು ಶ್ರೀ