ರಾಯಭಾಗ, ಅ. 5 : (ಸಮದರ್ಶಿ ಸುದ್ದಿ) - ಹಸುಗಳಿಗೆ ಮೇವು ಹಾಕುವ ವಿಚಾರವಾಗಿ ಪತಿ-ಪತ್ನಿ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ, ಪತಿಯೇ ಪತ್ನಿಯನ್ನು ಕುಡಗೋಲಿನಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮಾಡಲಗಿ ಗ್ರಾಮದಲ್ಲಿ ನಡೆದಿದೆ.
ಮಾಡಲಗಿ ಗ್ರಾಮದ ಕಲ್ಲವ್ವ ಮರಡಿ (55) ಹತ್ಯೆಯಾದ ಮಹಿಳೆ. ಅವರ ಪತಿ ಸದಾಶಿವ ಮರಡಿ (67) ಕೊಲೆ ಆರೋಪಿಯಾಗಿದ್ದು, ಘಟನೆ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ. ದಂಪತಿ ನಡುವೆ ಹಲವು ವರ್ಷಗಳಿಂದ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಹಸುಗಳಿಗೆ ಮೇವು ಹಾಕುವ ವಿಚಾರವಾಗಿ ಇಬ್ಬರ ನಡುವೆ ಮತ್ತೆ ವಾಗ್ವಾದ ನಡೆದಿತ್ತು. ಬಳಿಕ ಕಲ್ಲವ್ವ ಅವರು ಹಸುಗಳಿಗೆ ಮೇವು ತರಲು ಕಬ್ಬಿನ ಗದ್ದೆಗೆ ತೆರಳಿದ್ದರು. ಈ ವೇಳೆ ಅವರ ಹಿಂದೆಯೇ ಗದ್ದೆಗೆ ತೆರಳಿದ ಸದಾಶಿವ, ಕುಡಗೋಲಿನಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಸದಾಶಿವ ಮರಡಿಯನ್ನು ವಶಕ್ಕೆ ಪಡೆದು ಬಂಧಿಸಿದ್ದು, ರಾಯಭಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಗೆ ಕಾರಣವಾದ ಘಟನೆ ಹಾಗೂ ದಂಪತಿ ನಡುವಿನ ಹಿಂದಿನ ಜಗಳಗಳ ಕುರಿತೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.