ePaper
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹೆಸರಾಂತ ನಟ ಲಕ್ಷ್ಮಣ ಇನ್ನಿಲ್ಲ

ಬೆಂಗಳೂರು : ಕನ್ನಡ ಚಿತ್ರರಂಗದ ಹೆಸರಾಂತ ಖಳ ನಟ ಹಾಗೂ ಪೋಷಕ ನಟ ಲಕ್ಷ್ಮಣ ಹೃದಯಾಘಾತದಿಂದಾಗಿ ಸೋಮವಾರ ಬೆಳಿಗ್ಗೆ ನಿಧನರಾದರು. ಅವರಿಗೆ 74 ವರ್ಷ ವಯಸ್ಸಾಗಿತ್ತು.
ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.

ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಲಕ್ಷ್ಮಣ ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಳಿಗ್ಗೆ ಸುಮಾರು 3.30 ಸಮಯದಲ್ಲಿ ಲಕ್ಷ್ಮಣ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಕೂಡಲೇ ಮನೆಯವರು ಅವರನ್ನು ನಾಗರಬಾವಿಯ ಜಿ.ಎಂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲೇ ಲಕ್ಷ್ಮಣ ಕೊನೆಯುಸಿರೆಳೆದಿದ್ದಾರೆ.  ಮೂಡಲಪಾಳ್ಯದ ಅವರ ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ, ಇಂದೇ ಅಂತ್ಯಕ್ರಿಯೆ ನಡೆಯಿತು..

300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಲಕ್ಷ್ಮಣ ಅವರು ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಹಲವಾರು ಸಿನಿಮಾಗಳಲ್ಲಿ ಖಳನಟನಾಗಿ ಲಕ್ಷ್ಮಣ ಪಾತ್ರ ಮಾಡಿದ್ದಾರೆ. ಡಾ.ರಾಜಕುಮಾರ, ಡಾ.ವಿಷ್ಣುವರ್ಧನ, ಡಾ. ಅಂಬರೀಶ, ಶಂಕರನಾಗ್‌ ರವಿಚಂದ್ರನ್, ಶಿವರಾಜಕುಮಾರ್ ಹೀಗೆ ಹಲವಾರು ನಟರೊಂದಿಗೆ ನಟಿಸಿದ್ದಾರೆ. ಬಹುತೇಕ ಸಿನಿಮಾಗಳಲ್ಲಿ ಅವರು ಖಳನಟನಾಗಿ ಹಾಗೂ ಇನ್‌ಸ್ಪೆಕ್ಟರ್ ಪಾತ್ರದಲ್ಲಿ ನಟಿಸಿದ್ದಾರೆ.

ಲಕ್ಷ್ಮಣ ಅವರ ಕುಟುಂಬದಲ್ಲಿ ತಂದೆ ಹಾಗೂ ಸಹೋದರ ಪೊಲೀಸ್ ಆಗಿದ್ದರಿಂದ ಅವರಿಗೂ ಸೈನ್ಯ ಸೇರುವ ಆಸೆ ಇತ್ತಂತೆ. ಆದರೆ ತಾಯಿ ಒಪ್ಪದ ಕಾರಣ ಅವರು ಬಣ್ಣದ ಲೋಕಕ್ಕೆ ಬಂದರು. ರಂಗಭೂಮಿಯಲ್ಲಿ ಕೆಲ ವರ್ಷಗಳ ಕಾಲ ಕೆಲಸ ಮಾಡಿದ ಇವರು ಆರಂಭದಲ್ಲಿ ಫ್ಯಾಕ್ಟರಿಯಲ್ಲೂ ಕೆಲಸ ಮಾಡಿದ್ದಾರೆ. ಬಳಿಕ ಸಿನಿಮಾ ರಂಗಕ್ಕೆ ಕಾಲಿಟ್ಟರು. 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದರು. ವಿಶೇಷವಾಗಿ ಪೋಷಕ ಹಾಗೂ ಖಳ ನಾಯಕನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.ಫ್ಯಾಕ್ಟರಿಯಲ್ಲಿ ಏರ್ಪಡಿಸುತ್ತಿದ್ದ ಕಾರ್ಯಕ್ರಮಗಳಲ್ಲಿ ಲಕ್ಷ್ಮಣ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಅಲ್ಲದೆ, ಕಸರತ್ತು ಮಾಡಿ ಬಾಡಿ ಬಿಲ್ಡ್‌ ಸಹ ಮಾಡಿದ್ದರು. ಮುಂದೆ ಇದೇ ಅವರಿಗೆ ಚಿತ್ರರಂಗದಲ್ಲಿ ಅನುಕೂಲವಾಯಿತು. 'ಉಷಾ ಸ್ವಯಂವರ’ ಎಂಬ ಚಿತ್ರದ ಮೂಲಕ ಲಕ್ಷ್ಮಣ ನಾಯಕನಾಗಿ ಚಿತ್ರರಂಗಕ್ಕೆ ಬಂದರು. ಆದರೆ ನಂತರದ ಸಿನಿಮಾಗಳಲ್ಲಿ ಅವರು ಖಳನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ನಟಿಸಿದರು.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.