ಬೆಳಗಾವಿ, ಅ. 30: ಕನ್ನಡ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಮಹಾರಾಷ್ಟ್ರದ ಶಿವಸೇನೆ (ಉದ್ಧವ ಠಾಕ್ರೆ ಬಣ) ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಬೆಳಗಾವಿ ಜಿಲ್ಲೆ ಪ್ರವೇಶಿಸುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಎಂಇಎಸ್ ಆಯೋಜಿಸಲು ಉದ್ದೇಶಿಸಿರುವ ಕರಾಳ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಕೊಲ್ಲಾಪುರ ಜಿಲ್ಲೆಯ ಶಿವಸೇನೆ ಮುಖಂಡರು ಹಾಗೂ ಕಾರ್ಯಕರ್ತರು ಬೆಳಗಾವಿಗೆ ಆಗಮಿಸುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಬಂಧ ವಿಧಿಸಲಾಗಿದೆ.
ಕೊಲ್ಲಾಪುರ ಜಿಲ್ಲಾ ಶಿವಸೇನೆ ಅಧ್ಯಕ್ಷ ವಿಜಯ ಶಾಮರಾವ್ ದೇವಣೆ ನೇತೃತ್ವದಲ್ಲಿ ಸುಮಾರು 25 ಮಂದಿ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರು ನಿಪ್ಪಾಣಿ ಮಾರ್ಗವಾಗಿ ಬೆಳಗಾವಿ ಜಿಲ್ಲೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.
ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಭಾಷಣಗಳು ಅಥವಾ ಹೇಳಿಕೆಗಳಿಂದ ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಉದ್ವಿಗ್ನತೆ ಉಂಟಾಗಬಹುದು. ಇದರಿಂದ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಆತಂಕವಿದೆ ಎಂದು ಪೊಲೀಸ್ ವರದಿಯಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ–2023ರ ಕಲಂ 163ರ ಅಡಿಯಲ್ಲಿ ಜಿಲ್ಲಾಧಿಕಾರಿ ನಿಷೇಧಾಜ್ಞೆ ಹೊರಡಿಸಿದ್ದಾರೆ.
ಕೊಲ್ಲಾಪುರ ಜಿಲ್ಲಾ ಶಿವಸೇನೆ ಅಧ್ಯಕ್ಷ ವಿಜಯ ಶಾಮರಾವ್ ದೇವಣೆ, ಶಿವಸೇನೆ ಉಪಾಧ್ಯಕ್ಷ ಸಂಜಯ ಪೂವಾರ್, ಕೊಲ್ಲಾಪುರ ನಗರ ಪ್ರಮುಖ ಸುನೀಲ ಮೋದಿ, ಶಿವಸೇನೆ ಗ್ರಾಮೀಣ ಜಿಲ್ಲಾ ಪ್ರಮುಖ ಸುನೀಲ ಶಿಂತ್ರೆ, ಕೊಲ್ಲಾಪುರ ನಗರ ಪ್ರಮುಖ ವಿಶಾಲ ದೇವಕುಳೆ ಹಾಗೂ ಕೊಲ್ಲಾಪುರ ಜಿಲ್ಲಾ ನಗರ ಪ್ರಮುಖ ಮಂಜೀತ ಮಾನೆ ಅವರಿಗೆ ಬೆಳಗಾವಿ ಜಿಲ್ಲೆ ಪ್ರವೇಶ ನಿಷೇಧಿಸಲಾಗಿದೆ.
ಇವರೊಂದಿಗೆ ಆಗಮಿಸುವ ಇತರ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರಿಗೂ ನಿರ್ಬಂಧ ಅನ್ವಯವಾಗಲಿದೆ. ನಿಪ್ಪಾಣಿ–ಕೋಗನೊಳ್ಳಿ ಮಾರ್ಗವಾಗಿ ಈ ಮುಖಂಡರು ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇರುವುದರಿಂದ ಗಡಿಭಾಗದಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ.
ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.