ತೆಹ್ರಾನ್, ಆಗಸ್ಟ್ 13: ಇಸ್ರೇಲ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗಳಿಗೆ ಫ್ರಾನ್ಸ್ ನೀಡುತ್ತಿರುವ ಬೆಂಬಲದಿಂದ ಮಾನವ ಹಕ್ಕುಗಳು ಹಾಗೂ ಅಂತರರಾಷ್ಟ್ರೀಯ ಕಾನೂನಿನ ಕುರಿತು ಮಾತನಾಡುವ ನೈತಿಕ ಅಧಿಕಾರವನ್ನು ಫ್ರಾನ್ಸ್ ಕಳೆದುಕೊಂಡಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಟೀಕಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅರಘ್ಚಿ, ಮಾನವ ಹಕ್ಕುಗಳು ಮತ್ತು ಅಂತರರಾಷ್ಟ್ರೀಯ ಕಾನೂನಿನ ಬಗ್ಗೆ ಇತರ ದೇಶಗಳಿಗೆ ಉಪದೇಶ ನೀಡುವುದನ್ನು ಫ್ರಾನ್ಸ್‌ನಂತಹ ದೇಶಗಳು ಮೊದಲು ನಿಲ್ಲಿಸಬೇಕು ಎಂದು ಕಿಡಿಕಾರಿದ್ದಾರೆ.
‘ಮಾನವ ಹಕ್ಕುಗಳು’ ಮತ್ತು ಅಂತರರಾಷ್ಟ್ರೀಯ ಕಾನೂನಿನ ಕುರಿತು ಜಗತ್ತಿಗೆ ಪಾಠ ಮಾಡುವ ದೇಶಗಳ ನಿಲುವಿನಲ್ಲಿ ಸ್ಪಷ್ಟವಾದ ಬೂಟಾಟಿಕೆ ಕಂಡುಬರುತ್ತಿದೆ. ಇಂತಹ ನಿಲುವು ಮುಜುಗರ ಉಂಟುಮಾಡುವಂತಿದೆ ಎಂದು ಅವರು ಟೀಕಿಸಿದ್ದಾರೆ.
ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿದೆ ಎಂದು ಇರಾನ್ ಆರೋಪಿಸುತ್ತಿರುವ ನರಮೇಧ ಹಾಗೂ ಇರಾನ್ ವಿರುದ್ಧದ ಇಸ್ರೇಲಿ ಆಕ್ರಮಣಕ್ಕೆ ಫ್ರಾನ್ಸ್ ನೀಡುತ್ತಿರುವ ಬೆಂಬಲವು, ತಾನು ಹೊಂದಿದ್ದೇನೆ ಎಂದು ಭಾವಿಸಿಕೊಂಡಿದ್ದ ನೈತಿಕ ಸ್ಥಾನಮಾನವನ್ನೇ ಸಂಪೂರ್ಣವಾಗಿ ಹಾಳುಮಾಡಿಕೊಂಡಿದೆ ಎಂದು ಅರಘ್ಚಿ ಆರೋಪಿಸಿದ್ದಾರೆ.
ಇಸ್ರೇಲ್‌ನ ಸೇನಾ ಕಾರ್ಯಾಚರಣೆಗಳು ಮತ್ತು ಗಾಝಾದಲ್ಲಿನ ಮಾನವೀಯ ಪರಿಸ್ಥಿತಿ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಭಿನ್ನಾಭಿಪ್ರಾಯಗಳು ಮುಂದುವರಿದಿರುವ ನಡುವೆಯೇ ಇರಾನ್ ವಿದೇಶಾಂಗ ಸಚಿವರ ಈ ಹೇಳಿಕೆ ಹೊರಬಿದ್ದಿದೆ. ಫ್ರಾನ್ಸ್‌ನ ವಿದೇಶಾಂಗ ನೀತಿ ಹಾಗೂ ಇಸ್ರೇಲ್‌ಗೆ ಅದು ನೀಡುತ್ತಿರುವ ಬೆಂಬಲದ ಕುರಿತು ಇರಾನ್ ಈ ಹಿಂದೆಯೂ ಹಲವು ಬಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.