ಬೈಲಹೊಂಗಲ, ನ. 3: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸ್ವಾಭಿಮಾನಿ ಜೈ ಜವಾನ್ ಜೈ ಕಿಸಾನ್ ರೈತ ಸಂಘದ ನೇತೃತ್ವದಲ್ಲಿ ಮಂಗಳವಾರ ಕರೆ ನೀಡಲಾಗಿದ್ದ ಬೈಲಹೊಂಗಲ ನಗರ ಬಂದ್ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ವ್ಯಾಪಾರ ವಹಿವಾಟು ಹಾಗೂ ಸಾರಿಗೆ ಸಂಚಾರ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿತು.
ರೈತರ ಹೋರಾಟಕ್ಕೆ ಕನ್ನಡಪರ, ರೈತಪರ, ದಲಿತ ಹಾಗೂ ಕಾರ್ಮಿಕ ಸಂಘಟನೆಗಳು, ವಕೀಲರ ಸಂಘ ಮತ್ತು ಮಾಜಿ ಸೈನಿಕರ ಸಂಘಟನೆಗಳು ಬೆಂಬಲ ಸೂಚಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದವು.
ನಗರದ ವ್ಯಾಪಾರಸ್ಥರು ಸ್ವಯಂಪ್ರೇರಿತವಾಗಿ ಅಂಗಡಿ aಮುಂಗಟ್ಟುಗಳನ್ನು ಮುಚ್ಚಿ ರೈತರ ಬೇಡಿಕೆಗಳಿಗೆ ಬೆಂಬಲ ವ್ಯಕ್ತಪಡಿಸಿದರು. ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಾರ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.
ಬಂದ್ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ಗಳ ಸಂಚಾರಕ್ಕೂ ಅಡ್ಡಿಯುಂಟಾಗಿದ್ದು, ನಗರದ ವಿವಿಧೆಡೆ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದರಿಂದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ರೈತರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ಸಂಘಟನೆಯ ಮುಖಂಡರು ತಿಳಿಸಿದರು. ವಿವಿಧ ಸಂಘಟನೆಗಳು ಹಾಗೂ ವ್ಯಾಪಾರಸ್ಥರ ಬೆಂಬಲದೊಂದಿಗೆ ಬೈಲಹೊಂಗಲ ಬಂದ್ ಯಶಸ್ವಿಯಾಗಿ ಮುಕ್ತಾಯಗೊಂಡಿತು.