1.60 ಲಕ್ಷವರೆಗಿನ ಬೆಳೆಸಾಲಕ್ಕೆ ಭೋಜಾ ಇಲ್ಲ: ಜಿಲ್ಲಾಧಿಕಾರಿ ನಿತೇಶ ಪಾಟೀಲ

A B Dharwadkar
1.60 ಲಕ್ಷವರೆಗಿನ ಬೆಳೆಸಾಲಕ್ಕೆ ಭೋಜಾ ಇಲ್ಲ: ಜಿಲ್ಲಾಧಿಕಾರಿ ನಿತೇಶ ಪಾಟೀಲ
Latest news isolated icon, megaphone or bullhorn, breaking report vector. Info announcement and TV or radio broadcast, web article, loudspeaker. Daily headline emblem or logo, message or advertising

ಬೆಳಗಾವಿ : ಕಳೆದ ಸಾಲಿನಲ್ಲಿ ಶಿಫಾರಸ್ಸು ಮಾಡಲಾಗಿರುವ ಅಲ್ಪಾವಧಿ ಬೆಳೆಸಾಲದ ಪ್ರಮಾಣವನ್ನು 2023-24 ನೇ ಸಾಲಿಗಾಗಿ ಪ್ರತಿಯೊಂದು ಬೆಳೆಗೆ ಶೇ.10ರಷ್ಟು ಹೆಚ್ಚಿಸಲು ಶಿಫಾರಸ್ಸು ಮಾಡಲಾಗುವುದು ಎಂದು ಜಿಲ್ಲಾ ಮಟ್ಟದ ತಾಂತ್ರಿಕ ತಜ್ಞರ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ತಿಳಿಸಿದರು.

  2023-24 ನೇ ಸಾಲಿಗಾಗಿ ಬೆಳೆ ಬೆಳೆಯಲು ಬೆಳೆಸಾಲ ಪ್ರಮಾಣ ನಿಗದಿಪಡಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ತಾಂತ್ರಿಕ ತಜ್ಞರ ಸಮಿತಿ ಸಭೆಯಲ್ಲಿ ನಬಾರ್ಡ್ ಸಿದ್ಧಪಡಿಸಿದ 2023-24ನೇ ಸಾಲಿನ ರೂ. 19,614.45 ಕೋಟಿಯ ಸಂಭಾವ್ಯ ಕ್ರೆಡಿಟ್ ಲಿಂಕ್ಡ್ ಪ್ಲ್ಯಾನ್(ಪಿಎಲ್ ಪಿ) ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಬ್ಬು ಬೆಳೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಖರ್ಚು-ವೆಚ್ಚಗಳಲ್ಲಿ ಗಣನೀಯ ಹೆಚ್ಚಳವಾಗಿರುವುದರಿಂದ ಕಬ್ಬು ಬೆಳೆಸಾಲ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ರೈತರು ಮನವಿ ಮಾಡಿಕೊಂಡರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕಳೆದ ಬಾರಿ 56 ಸಾವಿರ ಇರುವುದನ್ನು ಈ ಬಾರಿ 71 ಸಾವಿರ ನಿಗದಿಪಡಿಸಲು ಉಳಿದಂತೆ ತಂಬಾಕು ಸೇರಿ ಎಲ್ಲ ಬೆಳೆಸಾಲ ಪ್ರಮಾಣವನ್ನು ಶೇ.10 ರಷ್ಟು ಹೆಚ್ಚಿಸಲು ಶಿಫಾರಸ್ಸು ಮಾಡಲಾಗುವುದು ಎಂದರು.

ಜಿಲ್ಲೆಯಲ್ಲಿ ರೂ. 9 ಸಾವಿರ ಕೋಟಿ ಬೆಳೆಸಾಲ:

 ಜಿಲ್ಲೆಯಲ್ಲಿ ಈ ಬಾರಿ ಆದ್ಯತಾ ವಲಯಕ್ಕೆ ನಬಾರ್ಡ್ ಮೌಲ್ಯಮಾಪನದ ಪ್ರಕಾರ ಒಟ್ಟಾರೆ 19,614.45 ಕೋಟಿ ಸಾಲ ಸಾಮಥ್ರ್ಯವಿದೆ ಅದರಲ್ಲಿ ಕೃಷಿಸಾಲ ಸಂಭಾವ್ಯತೆ 9,780.41 ಕೋಟಿ ಬೆಳೆಸಾಲವನ್ನು ನೀಡಲು ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಪಾಟೀಲ ತಿಳಿಸಿದರು.

   ರೈತರು ಬೆಳೆಸಾಲವನ್ನು ಬ್ಯಾಂಕುಗಳಿಂದಲೇ ಪಡೆದುಕೊಳ್ಳಬೇಕು. ಖಾಸಗಿ ಲೇವಾದೇವಿಗಾರರು ಅಥವಾ ಮೀಟರ್ ಬಡ್ಡಿಯ ಮೇಲೆ ಪಡೆದುಕೊಂಡು ಸಂಕಷ್ಟಕ್ಕೀಡಾಗಬಾರದು ಎಂದು ಸಲಹೆ ನೀಡಿದರು.

1.60 ಲಕ್ಷವರೆಗಿನ ಬೆಳೆಸಾಲಕ್ಕೆ ಭೋಜಾ ಇಲ್ಲ:

1.60 ಲಕ್ಷ ವರೆಗೆ ಯಾವುದೇ ದಾಖಲೆಗಳಿಲ್ಲದೇ ಪಹಣ  ಮತ್ತಿತರ ಸರಳ ದಾಖಲೆಗಳ ಆಧಾರದ ಮೇಲೆ ಸಾಲವನ್ನು ನೀಡಬೇಕು. ಈ ಸಾಲಕ್ಕೆ ಭೋಜಾ ಏರಿಸುವುದಿಲ್ಲ. ಒಂದು ವೇಳೆ 1.60 ಲಕ್ಷ ಬೆಳೆಸಾಲಕ್ಕೆ ಭೋಜಾ ಏರಿಸಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಎಚ್ಚರಿಕೆ ನೀಡಿದರು.
1.60 ಲಕ್ಷ ವರೆಗೆ ಯಾವುದೇ ದಾಖಲೆಗಳಿಲ್ಲದೇ ಸಾಲವನ್ನು ನೀಡಲಾಗುತ್ತದೆ. ಈ ಸಾಲಕ್ಕೆ ಭೋಜಾ ಏರಿಸುವುದಿಲ್ಲ ಎಂದು ಲೀಡ್ ಬ್ಯಾಂಕಿನ ವ್ಯವಸ್ಥಾಪಕ ಸುಧೀಂದ್ರ ಕುಲಕರ್ಣಿ ತಿಳಿಸಿದರು.

ಕಾನೂನು ಸಲಹೆಗಾರರ ಶುಲ್ಕ ಬ್ಯಾಂಕುಗಳೇ ಭರಿಸಲಿ:
ರೈತರಿಗೆ ಅಲ್ಪಾವಧಿ ಬೆಳೆಸಾಲ ನೀಡಲು ಸರಳ ರೀತಿಯ ದಾಖಲೆಗಳನ್ನು ಪಡೆದುಕೊಂಡು ಬೆಳೆಸಾಲ ನೀಡಲು ಕ್ರಮ ತೆಗೆದುಕೊಳ್ಳಬೇಕು. ಸಾಲ ನೀಡುವಾಗ ಕಾನೂನು ಸಲಹೆಗಾರರ ಶುಲ್ಕವನ್ನು ಬ್ಯಾಂಕುಗಳೇ ಭರಿಸಬೇಕು ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಡಿಸಿಸಿ ಬ್ಯಾಂಕಿನವರು ಕಾನೂನು ಸಲಹೆ ಪಡೆದುಕೊಳ್ಳದೇ 1.60 ಲಕ್ಷವರೆಗೆ ಬೆಳೆಸಾಲ ನೀಡುವಾಗ ಇತರೆ ಬ್ಯಾಂಕುಗಳು ಏಕೆ ಕಾನೂನು ಸಲಹೆ ಪಡೆದುಕೊಳ್ಳಬೇಕು ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿಗಳು, ಅನಗತ್ಯವಾಗಿ ರೈತರ ಮೇಲೆ ಶುಲ್ಕದ ಹೊರೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದರು. ಈ ನಿಟ್ಟಿನಲ್ಲಿ ಎಸ್.ಎಲ್.ಬಿ.ಸಿ.ಗೆ ಪತ್ರ ಬರೆಯಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

    ಬೆಳೆಸಾಲ ನೀಡುವಾಗಲೂ ಕೃಷಿಕರ ಸಿಬಿಲ್ ಸ್ಕೋರ್ ಪರಿಶೀಲಿಸಲಾಗುತ್ತದೆ. ಇದರಿಂದ ರೈತರು ಸಾಲ ಪಡೆಯುವುದು ಕಷ್ಟವಾಗುತ್ತಿದ್ದು, ಇದನ್ನು ತಪ್ಪಿಸಲು ರೈತರು ಒತ್ತಾಯಿಸಿದರು.

ಈ ಬಗ್ಗೆ ಪರಿಶೀಲಿಸಿ ಸೂಕ್ತ ನಿರ್ದೇಶನವನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭರವಸೆ ನೀಡಿದರು.  ಪ್ರತಿ ಮೂರು ವರ್ಷಕ್ಕೊಮ್ಮೆ ಕಾನೂನು ಸಲಹೆ ಪಡೆಯಲಾಗುತ್ತಿದೆ ಎಂದು ರೈತರು ಸಭೆಯ ಗಮನಕ್ಕೆ ತಂದರು.

ಬೆಳೆಸಾಲ ನೀಡಲು ಬ್ಯಾಂಕುಗಳು ವಿವಿಧ ಬಗೆಯ ದಾಖಲೆಗಳನ್ನು ಹಾಗೂ ಕಾನೂನು ಸಲಹೆ ಪಡೆಯಬೇಕಾಗಿರುವುದರಿಂದ ರೈತರು ಅನಗತ್ಯ ಖರ್ಚು ಭರಿಸಬೇಕಾಗುತ್ತಿದ್ದು, ಇದನ್ನು ತಪ್ಪಿಸಬೇಕು ಎಂದು ರೈತರು ಒತ್ತಾಯಿಸಿದರು.

ರೈತರ ಒಪ್ಪಿಗೆಯನ್ನು ಪಡೆದುಕೊಳ್ಳದೇ ಅವರ ಖಾತೆಯಲ್ಲಿ ಇರುವ ಹಣವನ್ನು ಕಡಿತಗೊಳಿಸಬಾರದು. ಯಾವುದೇ ರೀತಿಯ ಸಾಲ ಬಾಕಿ ಇದ್ದರೆ ಆ ಬಗ್ಗೆ ಖಾತೆದಾರರ ಸಮ್ಮತಿ ಪಡೆದುಕೊಂಡು ಬಾಕಿ ಹಣವನ್ನು ಕಟಾಯಿಸಬಾರದು ಎಂದು ಬ್ಯಾಂಕಿನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಿವನಗೌಡ ಪಾಟೀಲ, ಜಿಲ್ಲಾ ಅಗ್ರಣ  ಬ್ಯಾಂಕಿನ ಎಲ್.ಡಿ.ಸಿ.ಎಂ. ಸುಧೀಂದ್ರ ಕುಲಕರ್ಣಿ , ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಹಾಗೂ ಜಿಲ್ಲಾ ಮಟ್ಟದ ತಾಂತ್ರಿಕ ತಜ್ಞರ ಸಮಿತಿಯ ಸದಸ್ಯ ಕಾರ್ಯದರ್ಶಿ ಅವರ ಪರವಾಗಿ ಕಳಾವಂತ, ಡಿಸಿಸಿ ಬ್ಯಾಂಕು ಹಾಗೂ ವಿವಿಧ ಬ್ಯಾಂಕುಗಳ ಅಧಿಕಾರಿಗಳು ಮತ್ತು ರೈತರು ಸಭೆಯಲ್ಲಿ ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.