ಯಾರೇ ಹೇಳಿದರೂ ಲೋಕಸಭೆ ಚುನಾವಣೆಗೆ ಸ್ಪರ್ಧೆ ಇಲ್ಲ : ಹುಕ್ಕೇರಿ

A B Dharwadkar
ಯಾರೇ ಹೇಳಿದರೂ ಲೋಕಸಭೆ ಚುನಾವಣೆಗೆ ಸ್ಪರ್ಧೆ ಇಲ್ಲ : ಹುಕ್ಕೇರಿ

ಬೆಳಗಾವಿ, ೧೧:  ಲೋಕಸಭಾ ಚುನಾವಣೆಗೆ ತಾವಾಗಲಿ ತಮ್ಮ ಮಗ ಗಣೇಶ ಆಗಲಿ ಸ್ಪರ್ಧಿಸುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ತಿಳಿಸಿದರು.

ಚಿಕ್ಕೋಡಿ ಕ್ಷೇತ್ರದಿಂದ ಹುಕ್ಕೇರಿ ಅವರನ್ನು ಪಕ್ಷ ಸ್ಪರ್ಧೆಗೆ ನಿಲ್ಲಿಸುವ ಸಾಧ್ಯತೆಯಿರುವುದರಿಂದ ಬೆಳಗಾವಿಯಲ್ಲಿ ಸೋಮವಾರ ತಮ್ಮನ್ನು ಭೆಟ್ಟಿಯಾದ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ತಾವು ಶಿಕ್ಷಕರ ಕ್ಷೇತ್ರದಿಂದ ಕಳೆದ ವರುಷ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದು ಸದಸ್ಯತ್ವ ಅವಧಿ ಇನ್ನೂ 4 ವರುಷವಿದೆ. ಬೆಳಗಾವಿ, ಬಾಗಲಕೋಟ ಮತ್ತು ವಿಜಯಪುರದ ಶಿಕ್ಷಕರು ತಮ್ಮ ಮೇಲೆ ಭರವಸೆಯಿಟ್ಟು ಗೆಲ್ಲಿಸಿದ್ದಾರೆ. ಅವರಿಗೆ ಅನ್ಯಾಯ ಮಾಡುವುದಿಲ್ಲ ಎಂದರು.

“ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿ ಕೇಂದ್ರದ ಹೈ ಕಮಾಂಡ್ ಅಪ್ಪಣೆ ನೀಡಿದರೂ ನಾನಾಗಲಿ ನನ್ನ ಮಗನಾಗಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲ್ಲ. ಬದಲಾಗಿ ಪಕ್ಷದ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲು ಪ್ರಯತ್ನ ಖಂಡಿತ ಮಾಡುತ್ತೇವೆ,” ಎಂದು 78-ವರುಷದ ಹುಕ್ಕೇರಿ ತಿಳಿಸಿದರು.

2014-ರಲ್ಲಿ ಸಚಿವರಾಗಿದ್ದ ತಮ್ಮನ್ನು ಚಿಕ್ಕೋಡಿಯಿಂದ ಸ್ಪರ್ಧೆಸಿದ್ದರು. ಗೆದ್ದಿದ್ದೆ. ಅದಕ್ಕೆ ಪ್ರತಿಯಾಗಿ ಪುತ್ರ ಗಣೇಶ್ ನನ್ನು ತಮ್ಮ ಕ್ಷೇತ್ರ ಚಿಕ್ಕೋಡಿ-ಸದಲಗಾದಿಂದ ಗೆಲ್ಲಿಸಿ ಮತ್ರಿ ಮಾಡುವ ಭರವಸೆ ನೀಡಿದ್ದರು. ಗಣೇಶ್ ಗೆದ್ದ, ಆದರೆ ಪಕ್ಷ ತನ್ನ ಮಾತು ಉಳಿಸಿಕೊಳ್ಳಲಿಲ್ಲ. ಕಳೆದ ಚುನಾವಣೆಯಲ್ಲಿ ಗಣೇಶ್ 78,000 ಮತಗಳ ಅಂತರದಿಂದ ಜಯಗಳಿಸಿದ ಈಗಲೂ ಸಚಿವ ಸ್ಥಾನ ನೀಡಿಲ್ಲ. ಹಾಗಾಗಿ ತಾವಾಗಲಿ, ಮಗ ಗಣೇಶ್ ಆಗಲಿ ಚಿಕ್ಕೋಡಿಯಿಂದ ಸ್ಪರ್ಧೆಸಲ್ಲ ಎಂದು ಹುಕ್ಕೇರಿ ತಿಳಿಸಿದರು. ತಮ್ಮನಾಗಲಿ ಪುತ್ರ ಗಣೇಶ್ ಅವರನ್ನಾಗಲಿ ಸಚಿವರನ್ನಾಗಿ ಮಾಡಲು ಯಾರಲ್ಲೂ ಕೇಳಲ್ಲ ಎಂದೂ ಹುಕ್ಕೇರಿ ತಿಳಿಸಿದರು.

ಈ ಮೊದಲೇ ನಿರ್ಧರಿಸಿದಂತೆ ಚಿಕ್ಕೋಡಿ ಕ್ಷೇತ್ರವನ್ನು ಕುರುಬ ಸಮುದಾಯಕ್ಕೆ ಮತ್ತು ಬೆಳಗಾವಿ ಕ್ಷೇತ್ರವನ್ನು ಲಿಂಗಾಯತ ಸಮುದಾಯಕ್ಕೆ ಮೀಸಲಿಡಬೇಕು. ಚಿಕ್ಕೋಡಿಯಲ್ಲಿ 3 ಲಕ್ಷ ಕುರುಬ ಸಮುದಾಯದ ಮತಗಳಿವೆ. ಆ ಸಮುದಾಯದ ಲಕ್ಷ್ಮಣರಾವ ಚಿಂಗಳೆ ಅವರ ಸ್ಪರ್ಧೆ ಬಹುತೇಕ ಖಚಿತವಾಗಿದೆ. ಇವರನ್ನು ಗೆಲ್ಲಿಸಿಕೊಂಡು ಬರುವ ಭರವಸೆಯನ್ನು ತಾವು ಕೊಡುವುದಾಗಿ ಏಳು ಬಾರಿ ಶಾಸಕರಾಗಿದ್ದ ಹುಕ್ಕೇರಿ ತಿಳಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.