ಬೆಳಗಾವಿ, ೩: ಅಂಗನವಾಡಿ ಮಕ್ಕಳು ತನ್ನ ತೋಟದಲ್ಲಿ ಬೆಳೆದಿದ್ದ ಮಲ್ಲಿಗೆ ಹೂವುಗಳನ್ನು ಕಿತ್ತಿದ್ದಕ್ಕೆ ಅಂಗನವಾಡಿ ಸಹಾಯಕಿಯ ಮೇಲೆ ಹಲ್ಲೆ ಮಾಡಿ ಅವರ ಮೂಗನ್ನೇ ಕತ್ತರಿಸಿದ ಹೇಯ ಕೃತ್ಯ ಬೆಳಗಾವಿ ತಾಲೂಕಿನ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಸುರ್ತೆ ಗ್ರಾಮದಲ್ಲಿ ನಡೆದಿದೆ.
50 ವರುಷದ ಸುಗಂಧಾ ಮೋರೆ ಮೂಗನ್ನು ಕತ್ತರಿಸಿಕೊಂಡ ನತದೃಷ್ಟೆಯಾಗಿದ್ದಾರೆ. ಕಲ್ಯಾಣಿ ಮೋರೆ ಎಂಬವ ಅವರ ಮೇಲೆ ಹಲ್ಲೆ ಮಾಡಿ ಕುಡುಗೋಲಿನಿಂದ ಅವರ ಮೂಗನ್ನು ಕತ್ತರಿಸಿದ್ದಾನೆ.
ಗ್ರಾಮದ ಅಂಗನವಾಡಿ ಶಾಲೆಯ ಪಕ್ಕದಲ್ಲೇ ಮೋರೆಯ ಮನೆಯಿದೆ. ಮನೆಯ ಪಕ್ಕದಲ್ಲಿ ಅವನ ಚಿಕ್ಕ ತೋಟವಿದ್ದು ಅದರಲ್ಲಿ ತರಕಾರಿ, ಹೂವು ಬೆಳೆದಿದ್ದಾನೆ. ಮಕ್ಕಳು ಅಂಗನವಾಡಿ ಪಕ್ಕದಲ್ಲಿದ್ದ ಕಲ್ಯಾಣಿ ಮೋರೆಯವರ ಮನೆಯ ಆವರಣದಲ್ಲಿ ಬೆಳೆದಿದ್ದ ಮಲ್ಲಿಗೆ ಹೂ ಕಿತ್ತಿದ್ದರು. ಇದರಿಂದ ಕೋಪಗೊಂಡ ಮನೆಮಾಲೀಕ ಕುಡುಗೋಲು ಹಿಡಿದು ಮಕ್ಕಳನ್ನು ಬೆದರಿಸಿದ್ದಾನೆ. ಇದನ್ನು ತಡೆಯಲು ಹೋಗಿದ್ದ ಸುಗಂಧಾ ಅವರ ಮೇಲೆ ಕುಡಗೋಲು ಬೀಸಿದ್ದಾನೆ. ಆಗ ಅವರ ಮೂಗಿಗೆ ತಾಗಿ ಅದು ಕತ್ತರಿಸಿ ತುಂಡಾಗಿ ಬಿದ್ದಿದೆ. ತೀವ್ರಗಾಯದಿಂದ ರಕ್ತ ಶ್ವಾಸಕೋಶಕ್ಕೆ ಹೋಗಿದ್ದರಿಂದ ಉಸಿರಾಟದ ತೊಂದರೆಯಾಗಿದೆ ಎನ್ನಲಾಗಿದೆ.
ಮಹಿಳೆಯ ಪತಿ ಮೂಗರಾಗಿದ್ದಾರೆ ಎನ್ನಲಾಗಿದೆ.
ತೀವ್ರ ರಕ್ತಸ್ರಾವವಾಗಿ ನಿಸ್ತೇಜಗೊಂಡ ಶಿಕ್ಷಕಿಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. “ಅತಿಯಾದ ರಕ್ತಸ್ರಾವದಿಂದ ಬಳಲುತ್ತಿದ್ದ ಅವರಿಗೆ ಅಗತ್ಯ ರಕ್ತ ನೀಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಘಟನೆ ಸೋಮವಾರ ನಡೆದಿದ್ದು ಮೂರು ದಿನ ಕಳೆದರೂ ಮೂಗು ಕತ್ತರಿಸಿದ ಆರೋಪಿಯನ್ನು ಈ ವರೆಗೂ ಬಂಧಿಸಿಲ್ಲ ಎನ್ನಲಾಗಿದೆ.
ಮಕ್ಕಳು ಅರಿಯದೇ ಮಾಡಿದ ತಪ್ಪಿಗೆ ಬಡಪಾಯಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿ ಮೂಗು ಕತ್ತರಿಸಿದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕೆಂದು ಗ್ರಾಮದ ಜನರ ಆಗ್ರಹವಾಗಿದೆ.