ಹುಬ್ಬಳ್ಳಿ: ಬೇರೆ ನಗ್ನ ಯುವತಿಯರ ಚಿತ್ರಗಳಿಗೆ ಕಾಲೇಜು ವಿದ್ಯಾರ್ಥಿನಿಯರ ಮುಖದ ಫೋಟೊಗಳನ್ನು ಅಂಟಿಸಿ, ಸಾಮಾಜಿಕ ಜಾಲತಾಣ ಇನಸ್ಟಾಗ್ರಾಮನಲ್ಲಿ ಪೋಸ್ಟ್ ಮಾಡಿದ ಆರೋಪಿಗಾಗಿ ಹುಬ್ಬಳ್ಳಿಯ ಶುಕ್ರವಾರ ಹುಡುಕಾಟ ನಡೆಸಿದ್ದಾರೆ.
ನಗರದ ಖಾಸಗಿ ಕಾಲೇಜಿನ ನಾಲ್ಕು ವಿದ್ಯಾರ್ಥಿನಿಯರು ಈ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಡಿಸಿಪಿ ಗೋಪಾಲ ಬ್ಯಾಕೋಡ ನೇತೃತ್ವದ ತಂಡವು ಕಾಲೇಜಿಗೆ ಭೇಟಿ ನೀಡಿ ವಿಚಾರಣೆ ನಡೆಸಿದೆ. ಘಟನೆಯ ಬಗ್ಗೆ ಕಾಲೇಜಿನ ವಿದ್ಯಾರ್ಥಿನಿಯರು ಮೂರು ತಿಂಗಳ ಹಿಂದೆಯೇ ಕಾಲೇಜಿನ ಆಡಳಿತ ಮಂಡಳಿಗೆ ದೂರು ಸಲ್ಲಿಸಿದ್ದರೂ ಕಾಲೇಜಿನವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದಲ್ಲದೇ ಠಾಣೆಗೂ ದೂರು ನೀಡಿರಲಿಲ್ಲ ಎಂದು ತಿಳಿದು ಬಂದಿದೆ.
ಇನಸ್ಟಾಗ್ರಾಮನಲ್ಲಿ ನಕಲಿ ಖಾತೆಯೊಂದನ್ನು ತೆರೆದಿರುವ ಆರೋಪಿಯು ಫೋಟೊಗಳನ್ನು ಅಪಲೋಡ್ ಮಾಡಿದ್ದಾನೆ. ಇದರ ಜೊತೆಗೆ ‘ದಮ್ ಇದ್ದರೆ ನನ್ನ ಹಿಡಿಯಿರಿ’ ಎಂದು ಪೊಲೀಸರಿಗೆ ಸವಾಲು ಹಾಕುವ ಪೋಸ್ಟ ಕೂಡ ಮಾಡಿದ್ದಾನೆ. ‘ಪಾಲಿಟಿಕ್ಸ್ + ಪೊಲೀಸ್ + ಸೈಬರ್ … ಅರ್ಥ ಮಾಡ್ಕೋರಿ ಲೇ.. ನನ್ನ ಏನ…. ಮಾಡ್ಲಿಕು ಆಗೋದಿಲ್ಲ‘ ಎಂದು ಅಶ್ಲೀಲ ಪದಗಳನ್ನು ಕನ್ನಡದಲ್ಲಿ ಬರೆದುಕೊಂಡಿದ್ದಾನೆ. ನಗ್ನ ಚಿತ್ರಗಳೆಲ್ಲ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.
ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಖಾಸಗಿ ಕಾಲೇಜಿನ ನಾಲ್ಕು ವಿದ್ಯಾರ್ಥಿನಿಯರು ಇನಸ್ಟಾಗ್ರಾಮನಲ್ಲಿ ಪೋಸ್ಟ ಹಾಕಿದ್ದರ ಬಗ್ಗೆ ದೂರು ಕೊಟ್ಟಿದ್ದಾರೆ. ಕಾಲೇಜಿಗೆ ಹೋಗಿ ಕೆಲ ವ್ಯಕ್ತಿಗಳನ್ನು ವಿಚಾರಣೆ ಮಾಡಿದ್ದೇವೆ. ಯುವತಿಯರಿಗೆ ಅನುಮಾನ ಇದ್ದವರನ್ನು ಠಾಣೆಗೆ ಕರೆದು ವಿಚಾರಣೆ ಮಾಡುತ್ತಿದ್ದೇವೆ ಎಂದು ಹುಬ್ಬಳ್ಳಿ–ಧಾರವಾಡ ನಗರ ಪೊಲೀಸ್ ಆಯುಕ್ತ ಸಂತೋಷ ಬಾಬು ತಿಳಿಸಿದ್ದಾರೆ.
ಇನಸ್ಟಾಗ್ರಾಮ್ ಖಾತೆಯಲ್ಲಿ ಈ ರೀತಿಯ ಪ್ರಕರಣಗಳು ಆಗಾಗ ವರದಿಯಾಗುತ್ತಿವೆ. ಈ ಘಟನೆ ಮೂರು ತಿಂಗಳ ಹಿಂದೆಯೇ ನಡೆದಿದ್ದರೂ ಇದರ ಬಗ್ಗೆ ಕಾಲೇಜಿನವರು ಮಾಹಿತಿ ಕೊಡಬೇಕಿತ್ತು. ಯಾಕೆ ಕೊಟ್ಟಿಲ್ಲ ಎನ್ನುವ ಬಗ್ಗೆಯೂ ವಿಚಾರಣೆ ನಡೆಸಿದ್ದೇವೆ ಎಂದು ಅವರು ಹೇಳಿದರು. ಯುವತಿಯರ ಹೇಳಿಕೆ ಪ್ರಕಾರ ಕಾಲೇಜಿನಲ್ಲಿ ನಡೆಯುವ ಚಟುವಟಿಕೆಗಳು ಆರೋಪಿಗೆ ಎಲ್ಲಾ ಗೊತ್ತಿವೆ. ಹೀಗಾಗಿ ಈ ಕೆಲಸ ಮಾಡಿದ್ದು ವಿದ್ಯಾರ್ಥಿ ಇರಬಹುದು ಎನ್ನುವ ಅನುಮಾನ ಇದೆ. ಶೀಘ್ರ ಪತ್ತೆ ಹಚ್ಚುತ್ತೇವೆ ಎಂದು ಅವರು ತಿಳಿಸಿದರು.