ಗದಗ, ೧೬: ಟಾಟಾ ಸುಮೋ ಮತ್ತು ಕೆಎಸ್ಆರ್ ಟಿಸಿ ಬಸ್ ಮಧ್ಯೆ ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನರೇಗಲ್ ಗ್ರಾಮದ ಹೊರವಲಯದಲ್ಲಿ ಡಿಕ್ಕಿ ಸಂಭವಿಸಿದ್ದು ಸುಮೋ ವಾಹನದಲ್ಲಿದ್ದ ಆರು ಜನರು ಅಸು ನೀಗಿದ್ದಾರೆ. ಮೂರು ಜನ ತೀವ್ರವಾಗಿ ಗಾಯಗೊಂಡಿದ್ದು ಸೋಮವಾರ ಮುಂಜಾನೆ 11 ಗಂಟೆ ಸುಮಾರಿಗೆ ಸಂಭವಿಸಿದೆ.
ಪ್ರಾಥಮಿಕವಾಗಿ ಲಭ್ಯವಿದ್ದ ಮಾಹಿತಿ ಮೇಲೆ ಇವರೆಲ್ಲರೂ ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನಹಿಪ್ಪರಗಿ ಗ್ರಾಮದವರೆಂದೂ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಬಾಳೆಹೊಸೂರು ಮಠಕ್ಕೆ ತೆರಳಿದ್ದರೆಂದು ತಿಳಿದು ಬಂದಿದೆ.
ಢಿಕ್ಕಿಯಾದ ಬಸ್ ಗದಗ ಡಿಪೋಗೆ ಸೇರಿದ್ದು ಗದಗದಿಂದ ಗಜೇಂದ್ರಗಡ ಮಾರ್ಗವಾಗಿ ಹೊರಟಿತ್ತು ಮತ್ತು ಸುಮೋ ಎದುರಿನಿಂದ ಬರುತ್ತಿತ್ತೆಂದು ನರೇಗಲ್ ಪೊಲೀಸರು ತಿಳಿಸಿದ್ದಾರೆ.
ಅಪಘಾತದ ತೀವ್ರತೆಗೆ ಟಾಟಾ ಸುಮೋ ನುಜ್ಜು ಗುಜ್ಜಾಗಿದೆ. ಮೃತರನ್ನು ಮತ್ತು ಗಾಯಗೊಂಡವರನ್ನು ತುಂಬಾ ಪ್ರಯಾಸದಿಂದ ಹೊರಗೆ ತರಲಾಯಿತು. ಗಾಯಗೊಂಡವರನ್ನು ಲಕ್ಷ್ಮೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಉಪಚಾರಕ್ಕೆ ಗದಗ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಅಪಘಾತದಲ್ಲಿ ಅಸುನೀಗಿದವರನ್ನು ಸಚಿನ ಕತ್ತಿ 31, ಶಿವಕುಮಾರ ಕಲಶೆಟ್ಟಿ 50, ಚಂದ್ರಕಲಾ ಶಿವಕುಮಾರ ಹಿಪ್ಪರಗಿ 42, ರಾಣಿ ಕಲಶೆಟ್ಟಿ 32, ಡ್ರಾಕ್ಷಾಯಣಿ ಕತ್ತಿ 32 ಮತ್ತು ನಿಂಗಣೇಶ್ವರ ಕಲಶೆಟ್ಟಿ 6 ವರುಷವೆಂದು ಗುರುತಿಸಲಾಗಿದೆ.
ನರೇಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.