ಬಳ್ಳಾರಿ, 23: ತರಗತಿಯಲ್ಲಿ ಪಾಠ ಮಾಡುವಾಗ ಉಪನ್ಯಾಸಕನೊಬ್ಬ ಪ್ರವಾದಿ ಮಹಮ್ಮದ ಪೈಗಂಬರ ಹಾಗೂ ಇಸ್ಲಾಂ ಧರ್ಮದ ಆಚರಣೆಗಳ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದು ಉಪನ್ಯಾಸಕನ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವ ಘಟನೆ ಬಳ್ಳಾರಿಯ ಶ್ರೀಮೇಧ ಕಾಲೇಜಿನಲ್ಲಿ ನಡೆದಿದೆ.
ಕಾಲೇಜಿನ ಉಪನ್ಯಾಸಕ ಯು.ಎಸ್.ಗೌಡ ಎಂಬವರ ವಿರುದ್ದ ಮುಸ್ಲಿಂ ವಿದ್ಯಾರ್ಥಿಗಳು ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಉಪನ್ಯಾಸಕ ತರಗತಿಯಲ್ಲಿ ಪಾಠ ಮಾಡುವ ವೇಳೆ ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕು, ಆಚಾರ, ವಿಚಾರ, ಜೀವನ ಶೈಲಿಯ ಬಗ್ಗೆ ಕೆಟ್ಟದಾಗಿ ನಿಂದಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮುಸ್ಲಿಂರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಉಪನ್ಯಾಸಕನ ವಿರುದ್ಧವಷ್ಟೇ ಅಲ್ಲ ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಉಪನ್ಯಾಸಕ ಯು.ಎಸ್. ಗೌಡ ಭಾರತೀಯ ಸಂವಿಧಾನದ ಬಗ್ಗೆ ಪಾಠ ಮಾಡುವ ವೇಳೆ ಪಠ್ಯದಲ್ಲಿಯ ವಿಷಯ ಬಿಟ್ಟು ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕು ಅವರ ಆಚಾರ ವಿಚಾರ ಜೀವನ ಶೈಲಿಯ ಪದ್ಧತಿ ಬಗ್ಗೆ ಕೆಟ್ಟದಾಗಿ ಬಿಂಬಿಸುವಂತೆ ಮಾತನಾಡಿದ್ದಾನೆ. ಇದಷ್ಟೇ ಅಲ್ಲದೇ ಮಹಮ್ಮದ ಪೈಗಂಬರ್ ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಹಿಂದೆ ನಾಲ್ಕು ನಾಲ್ಕು ಮದುವೆಯಾಗುತ್ತಿದ್ದರು ಎಂದು ಪಾಠದಲ್ಲಿ ಇಲ್ಲದ ವಿಚಾರದ ಬಗ್ಗೆ ಮಾತನಾಡಿದ್ದಾನೆಂದು ಕೆಲ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಕಾಲೇಜು ಆಡಳಿತ ಮಂಡಳಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗದ ಕಾರಣ ಪ್ರತಿಭಟನೆ ನಡೆಸಿದರು ಎಂದು ಹೇಳಲಾಗಿದೆ.
ಇನ್ನು ವಿವಾದ ಜೋರಾಗುತ್ತಿದ್ದಂತೆ ಉಪನ್ಯಾಸಕ ಕ್ಷಮೆ ಕೇಳಿ ಹೋಗಿದ್ದಾನೆ ಎನ್ನಲಾಗುತ್ತಿದ್ದು ಆದರೆ ಅವಮಾನ ಮಾಡಿ ಕ್ಷಮೆ ಕೇಳಿದರೆ ನಡೆಯುವುದಿಲ್ಲ. ವಿವಾದಾತ್ಮಕ ರೀತಿಯಲ್ಲಿ ಮಾತನಾಡಿದ ಅತಿಥಿ ಉಪನ್ಯಾಸಕನನ್ನು ಬಂಧಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ ವರಿಷ್ಠ ರಂಜಿತ ಕುಮಾರ ಬಂಡಾರು ಅವರು ಕ್ರಮದ ಭರವಸೆ ನೀಡಲು ಯತ್ನಿಸಿದರು.
ಇಂತಹ ಶಿಕ್ಷಕರು ನಮಗೆ ಬೇಡವೇ ಬೇಡ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದು ವಾಗ್ವಾದ ನಡೆಸಿದರು. ನಂತರ ಮುಸ್ಲಿಂ, ದಲಿತ ಸಮುದಾಯದ ಯುವಕರು ಮತ್ತು ವಿದ್ಯಾರ್ಥಿಗಳು ಜಿಲ್ಲಾ ಪೊಲೀಸ ವರಿಷ್ಠರ ಕಚೇರಿ ಮುಂಭಾಗದಲ್ಲಿ ಜಮಾವಣೆಗೊಂಡು ಕೆಲಕಾಲ ಪ್ರತಿಭಟನೆ ನಡೆಸಿದರು ಎನ್ನಲಾಗಿದೆ. ಪೊಲೀಸ್ ಇನ್ಸಪೆಕ್ಟರ್ ಸುಭಾಷ ಅವರು ಎಫ್ಐಆರ್ ದಾಖಲಿಸಿಕೊಂಡು ಮುಸ್ಲಿಂ ಮುಖಂಡರಿಗೆ ಮತ್ತು ಭೀಮ ಆರ್ಮಿ ಸಂಘಟನೆ ಪ್ರಮುಖರಿಗೆ ದೂರಿನ ಪ್ರತಿ ನೀಡಿದ ನಂತರ ಶಾಂತಿಯುತವಾಗಿ ಪ್ರತಿಭಟನೆ ಹಿಂತೆಗೆದುಕೊಂಡರು ಎಂದು ತಿಳಿದು ಬಂದಿದೆ.