ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ನಾಡದೇವಿಯ ವಿವಿಧ ಭಾವಚಿತ್ರಗಳನ್ನು ಬಳಕೆ ಮಾಡಲಾಗುತ್ತಿತ್ತು. ಆದರೆ ಇದೀಗ ರಾಜ್ಯ ಸರ್ಕಾರದಿಂದ ಅಧಿಕೃತ ಕರ್ನಾಟಕ ಮಾತೆಯ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ.
ಈ ಚಿತ್ರವನ್ನು ರಾಜ್ಯದ ಎಲ್ಲಾ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿಯೂ ಬಳಕೆ ಮಾಡುವಂತೆ ಸೂಚಿಸಲಾಗಿದೆ.
ಈ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆದೇಶವನ್ನು ಹೊರಡಿಸಲಾಗಿದೆ. ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಕರ್ನಾಟಕ ಕಲೆ, ಸಂಸ್ಕೃತಿಯನ್ನು ಬಿಂಬಿಸುವಂತ, ಐವರು ಕಲಾವಿಧರ ಸಮಿತಿಯು ಶಿಫಾರಸ್ಸು ಮಾಡಿ, ಸರ್ಕಾರ ಒಪ್ಪಿರುವ ಕರ್ನಾಟಕ ಮಾತೆಯ ಚಿತ್ರವನ್ನು ಬಳಕೆ ಮಾಡುವಂತೆ ತಿಳಿಸಿದೆ.
ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿರುವ ಕರ್ನಾಟಕ ಮಾತೆಯ ಅಧಿಕೃತ ಚಿತ್ರದಲ್ಲಿ ನಾಡಿನ ಹಿನ್ನಲೆಯಲ್ಲಿ ಕರ್ನಾಟಕ ನಕ್ಷೆಯನ್ನು ಒಳಗೊಂಡಿದೆ. ಅಲ್ಲದೇ ಮುಖದಲ್ಲಿ ಸ್ವಭಾವಿಕ ಸೌಂದರ್ಯ, ದೈವಿಕ ಭಾವವನ್ನು ಸೂಚಿಸುವಂತೆ ಇದೆ.
ಎರಡು ಕೈಗಳು ವಾಸ್ತವಿಕತೆಗೆ ಹತ್ತಿರವಾಗುವಂತೆ ಕಾಣುತ್ತಿವೆ. ನಾಡದೇವಿಯ ಬಲಗೈಯಲ್ಲಿ ಅಭಯ ಮುದ್ರೆಯಿದೆ. ಎಡಗೈಯಲ್ಲಿ ತಾಳೆಗರಿಯು ಕನ್ನಡ ಭಾಷಾ ಸಂಪತ್ತು, ಜ್ಞಾನ ಸಮೃದ್ಧಿಯನ್ನು ಸೂಚಿಸುವಂತಿದೆ. ಇದಲ್ಲದೇ ಇನ್ನೂ ಹಲವು ವೈಶಿಷ್ಯಗಳನ್ನು ಒಳಗೊಂಡಂತೆ ಈ ಚಿತ್ರವನ್ನು ಕೆ.ಸೋಮಶೇಖರ ರಚಿಸಿದ್ದಾರೆ.