ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಸಂನ್ಮೂಲ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ನಿ. ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ರಾಮದುರ್ಗ ತಾಲೂಕಿನ ಸಾಲಹಳ್ಳಿಯ ಡಾ. ಶ್ಯಾಮ ಪ್ರಸಾದ ಮುಖರ್ಜಿ ವೇದಿಕೆಯಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ರಾಮದುರ್ಗ ತಾಲೂಕಿನ ವಿವಿಧ ಅಭಿವೃದ್ದಿ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಉದ್ಘಾಟನೆ ಸಮಾರಂಭ ನಡೆಯಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ ಪಾಟೀಲ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗಮಿಸಲಿದ್ದಾರೆ.
ಅದೇ ರೀತಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರಗೇಶ್ ಆರ್.ನಿರಾಣ , ನಗರಾಭವೃದ್ಧಿ ಸಚಿವ ಬಿ. ಎ ಬಸವರಾಜ (ಭೈರತಿ), ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸಕಾಲ ಸಚಿವ ಬಿ.ಸಿ ನಾಗೇಶ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವ ವಿ. ಸುನೀಲ್ ಕುಮಾರ್ ಹಾಗೂ ಕೈಮಗ್ಗ ಮತ್ತು ಜವಳಿ, ಸಕ್ಕರೆ ಅಭಿವೃದ್ಧಿ ಸಚಿವ ಶಂಕರ ಬಿ. ಪಾಟೀಲ ಮುನೇನಕೊಪ್ಪ ಅವರು ಮುಖ್ಯ ಅತಿಥಿಗಳಾಗಿ ಇರಲಿದ್ದಾರೆ. ರಾಮದುರ್ಗ ವಿಧಾನ ಸಭಾ ಮತಕ್ಷೇತ್ರದ ಶಾಸಕರಾದ ಮಹಾದೇವಪ್ಪಾ ಯಾದವಾಡ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಮಹೇಶ ಕುಮಠಳ್ಳಿ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ದುರ್ಯೋಧನ ಐಹೊಳೆ ಹಾಗೂ ಕರ್ನಾಟಕ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಪಿ. ರಾಜೀವ ಅವರು ವಿಶೇಷ ಆಮಂತ್ರಿತರಾಗಿ ಆಗಮಿಸಲಿದ್ದಾರೆ.
ಕಾಮಗಾರಿಗಳ ವಿವರ:
ಸವದತ್ತಿ ತಾಲೂಕಿನ ನವಿಲು ತೀರ್ಥ ಡ್ಯಾಮ್ ನಿಂದ ರಾಮದುರ್ಗ ತಾಲೂಕಿನ 137 ಜನವಸತಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಅಂದಾಜು ರೂ. 439 ಕೋಟಿ ವೆಚ್ಚದ ಕಾಮಗಾರಿ ಭೂಮಿ ಪೂಜೆ ನಡೆಯಲಿದೆ.
ರಾಮದುರ್ಗ ತಾಲೂಕಿನ ಹಂಪಿಹೊಳಿ ಗ್ರಾಮದಿಂದ ಗೊಣ್ಣಾಗರ ಗ್ರಾಮದವರೆಗೆ ಅಂದಾಜು ರೂ.126 ಕೋಟಿ ಮಲಪ್ರಭಾ ನದಿಗೆ ತಡೆಗೋಡೆ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ, ಹಾಗೂ ರಾಮದುರ್ಗ ತಾಲೂಕಿನ ಗೊಡಚಿ-ಸಾಲಹಳ್ಳಿ ನಡುವಿನ ಬನ್ನೂರು ಗ್ರಾಮದಲ್ಲಿ 220 ಕೆ. ವ್ಹಿ ವಿದ್ಯುತ್ ಸ್ವೀಕರಣ ಕೇಂದ್ರದ ಕಾಮಗಾರಿಯ ಭೂಮಿ ಪೂಜೆ ನಡೆಯಲಿದೆ.
ಅದೇ ರೀತಿಯಲ್ಲಿ ಅಂದಾಜು ರೂ. 3.24 ಕೋಟಿ ವೆಚ್ಚದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜು ಅರಸು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ, ರಾಮದುರ್ಗ ನೂತನ ಕಟ್ಟಡದ ಉದ್ಘಾಟನೆಯಾಗಲಿವೆ.
ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದಲ್ಲಿ ಅಂದಾಜು ರೂ. 3.01 ಕೋಟಿಯ ಸರ್ಕಾರಿ ಪ್ರೌಢಶಾಲೆಯ 09 ನೂತನ ಕೊಠಡಿ ಹಾಗೂ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 14 ನೂತನ ಕೊಠಡಿಗಳ ಹಾಗೂ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಅಂದಾಜು ರೂ. 2.15 ಕೋಟಿಯ ಸರಕಾರಿ ಪ್ರೌಢಶಾಲೆಯ 07 ನೂತನ ಕೊಠಡಿ, ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 08 ಕೊಠಡಿಗಳು ಉದ್ಘಾಟನೆಯಾಗಲಿವೆ. ಸುಮಾರು 2 ಕೋಟಿ ಅಂದಾಜು ವೆಚ್ಚದಲ್ಲಿ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ ಸರ್ಕಾರಿ ಪಿ.ಯು ಕಾಲೇಜು ನೂತನ ಕಟ್ಟಡದ ಉದ್ಘಾಟನಾ ನಡೆಯಲಿದೆ.