ಬೆಳಗಾವಿ : ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದ ನೇಗಿನಹಾಳ ಮಠದ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ ಮಠದಲ್ಲೇ ಆತ್ಮಹತ್ಯೆಗೆ ಶರಣಾಗಿದ್ದು ಈ ಹಿನ್ನೆಲೆಯಲ್ಲಿ ಸ್ವಾಮೀಜಿಗಳ ಆತ್ಮಹತ್ಯೆಗೆ ಕಾರಣರಾದ ಮಹಿಳೆಯರನ್ನು ತಕ್ಷಣ ಬಂಧಿಸಿ ಕ್ರಮ ಜರುಗಿಸಬೇಕು ಅಲ್ಲಿಯವರೆಗೆ ತಾವು ಮಠದ ಆವರಣದಿಂದ ತೆರಳುವದಿಲ್ಲ ಅಲ್ಲದೇ ಸ್ವಾಮಿಗಳ ಮೃತ ದೇಹವನ್ನು ಮಠದಿಂದ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ನೀಡುವದಿಲ್ಲವೆಂದು ಪ್ರತಿಭಟನೆ ಮಾಡಿದ್ದರು.
ಭಕ್ತರ ಮನವೊಲಿಸಿ ಪೊಲೀಸರು ಶವವನ್ನು ಪೋಸ್ಟ್ ಮಾರ್ಟಮ್ ಮಾಡುವದಕ್ಕೆ ಬೈಲಹೊಂಗಲದ ಸರಕಾರಿ ಆಸ್ಪತ್ರೆಗೆ ಸಾಗಿಸಿದರು. ನಂತರ ಶವವನ್ನು ಪುನಃ ಮಠಕ್ಕೆ ತೆಗೆದುಕೊಂಡು ಬರಲಾಯಿತು.
ಮಠಾಧೀಶರ ಆತ್ಮಹತ್ಯೆ ನಂತರ ಮಠದೊಳಗೆ ನಡೆಸುವ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಮಠದ ಕೋಣೆಯಲ್ಲಿ ಮೃತ ದೇಹವನ್ನು ಇರಿಸಲಾಗಿದ್ದು, ಮಂಗಳವಾರ ಮುಂಜಾನೆ ಮೃತದೇಹವನ್ನು ಸಾರ್ವಜನಿಕರ ವೀಕ್ಷಣೆಗೆ ಮಠದ ಆವರಣದಲ್ಲಿ ಇರಿಸಲಾಗುವುದು.
ಮಂಗಳವಾರ ಸಂಜೆ ಮಠದ ಆವರಣದಲ್ಲೇ ಸ್ವಾಮಿಗಳ ಅಂತ್ಯ ಸಂಸ್ಕಾರ ಜರುಗಲಿದ್ದು ರಾಜ್ಯದ ವಿವಿಧ ಮಠಾಧೀಶರು, ಸ್ವಾಮಿಗಳ ಕುಟುಂಬಸ್ಥರು ಭಾಗವಹಿಸಲಿದ್ದಾರೆ.
ಈ ಮಧ್ಯೆ ಸ್ವಾಮಿಗಳ ಕುರಿತು ತಮ್ಮ ದೂರವಾಣಿ ಸಂಭಾಷಣೆಯಲ್ಲಿ ಚರ್ಚಿಸಿದ ಬೆಳಗಾವಿಯ ಸತ್ಯಮ್ಮ ಮತ್ತು ಗಂಗಾವತಿಯ ರುದ್ರಮ್ಮ ಅವರ ವಿಚಾರಣೆ ಮಾಡಲಾಗುವದು ಎಂದು ಪ್ರಕರಣದ ತನಿಖಾಧಿಕಾರಿ ಬೈಲಹೊಂಗಲ ಪೊಲೀಸ್ ಇನ್ಸಪೆಕ್ಟರ್ ಸಾತ್ತೇನಹಳ್ಳಿ ತಿಳಿಸಿದರು.
ಸಮದರ್ಶಿ ವರದಿಗಾರರೊಂದಿಗೆ ಮಾತನಾಡಿದ ಮಠದ ಕೆಲ ಭಕ್ತರು, ಸ್ವಾಮಿಯ ಕುರಿತು ಮಾತನಾಡಿರುವ ಮಹಿಳೆಯರು ಈ ಹಿಂದೆ ಅನೇಕ ಬಾರಿ ಮಠದಲ್ಲಿ ಕಂಡು ಬಂದಿದ್ದರು. ಮಧ್ಯ ವಯಸ್ಸಿನ ಅವರು ನೇಗಿನಹಾಳಿನ ಮಠ ಮಾತ್ರವಲ್ಲ ಉತ್ತರ ಕರ್ನಾಟಕದ ಅನೇಕ ಲಿಂಗಾಯತ ಮಠಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಮಠಗಳಲ್ಲಿ ಬಸವ ತತ್ವ ಅಭ್ಯಸಿಸಿರುವ ಅವರು ಪ್ರವಚನ ಕೂಡ ನೀಡಿದ್ದಾರೆ ಎಂದು ತಿಳಿಸಿದರು.
ಮಠದ ಹಲವು ಮಹಿಳಾ ಭಕ್ತರು ಸ್ವಾಮಿಗಳ ಕುರಿತು ಒಳ್ಳೆಯ ಅಭಿಪ್ರಾಯ ವ್ಯಕ್ತ ಪಡಿಸಿದರು. ಸ್ವಾಮಿಗಳು ಮಹಿಳೆಯರ ಕುರಿತು ಗೌರವ ಹೊಂದಿದ್ದರು. ತೀರಾ ಸಂಕೋಚ ಸ್ವಭಾವದ ಅವರು ತಮ್ಮ ಬಳಿಗೆ ಆಶೀರ್ವಾದ ಪಡೆಯಲು ಹೋಗುವ ಯಾವುದೇ ಮಹಿಳೆಯ ಮುಖವನ್ನೂ ನೋಡುತ್ತಿರಲಿಲ್ಲವೆಂದಿದ್ದಾರೆ.