ಬೈಲಹೊಂಗಲ, ೧೭- ಬೆಳಗಾವಿ ಜಿಲ್ಲೆ ವಿಭಜನೆ ಬೇಡ. ಒಂದು ವೇಳೆ ಮಾಡುವುದಾದರೆ ಬ್ರಿಟಿಷ್ ಕಾಲದಿಂದಲೂ ಕಂದಾಯ ಉಪವಿಭಾಗ ಕೇಂದ್ರವಾಗಿರುವ ಬೈಲಹೊಂಗಲ ತಾಲೂಕನ್ನು ರಾಜ್ಯ ಸರಕಾರ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಶಿವರಂಜನ ಬೋಳಣ್ಣವರ ಹೇಳಿದರು.
ಅವರು ಪಟ್ಟಣದ ಶಾಖಾ ಮೂರು ಸಾವಿರ ಮಠದಲ್ಲಿ “ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ” ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ರಾಜಕೀಯ ಮುಖಂಡರುಗಳು ತಮ್ಮ ರಾಜಕೀಯ ಹಿತಕ್ಕೆ ಅನುಸಾರವಾಗಿ ಹೇಳಿಕೆ ನೀಡುತ್ತಿದ್ದು ಜನತೆಯ ನೆಮ್ಮದಿಯ ಬದುಕಿಗೆ ಬೆಂಕಿ ಹಚ್ಚುವ ಕೆಲಸವನ್ನು ಕೈ ಬಿಡಬೇಕು. ಜಿಲ್ಲೆಯಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿದ್ದು ಅವುಗಳತ್ತ ಗಮನ ನೀಡದೇ ತಮ್ಮ ಸ್ವಾರ್ಥಕ್ಕಾಗಿ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಅವರ ಘನತೆಗೆ ಶೋಭೆ ತರುವುದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೈಲಹೊಂಗಲ ಜಿಲ್ಲೆ ಮಾಡಲು ಕಳೆದ ಎರಡು ದಶಕಗಳಿಂದ ಈ ಭಾಗದ ಜನರು ಸವದತ್ತಿ, ರಾಮದುರ್ಗ, ಕಿತ್ತೂರ ಮುಖಂಡರ ಮತ್ತು ಜನರ ವಿಶ್ವಾಸದೊಂದಿಗೆ ಹೋರಾಟ ಮಾಡಿದ ಪರಿಣಾಮವೇ ಸರಕಾರವು ಅಖಂಡ ಬೆಳಗಾವಿ ಜಿಲ್ಲಾ ವಿಭಜನೆ ಮಾಡುವದನ್ನು ಕೈ ಬಿಟ್ಟಿದ್ದನ್ನು ಸಚಿವರು ಮನಗಾಣಬೇಕು ಎಂದು ಅವರು ಹೇಳಿದರು.
1997 ರಲ್ಲಿ ಆಗಿನ ಮುಖ್ಯಮಂತ್ರಿ ದಿ. ಜೆ.ಎಚ್. ಪಟೇಲರು ಜಿಲ್ಲೆ ವಿಭಜನೆ ಕ್ರಮ ಕೈಗೊಂಡಾಗ ಈ ಭಾಗದ ಜನರ ಉಗ್ರ ಹೋರಾಟಕ್ಕೆ ಮಣಿದು ಸಭಾಪತಿಯಾದ ಮಾಮನಿ ಮೂಲಕ ಪತ್ರವನ್ನು ಅಂದಿನ ಗಂಗಾಧರ ಶ್ರೀಗಳಿಗೆ ಮುಟ್ಟಿಸಿ ಸರಕಾರ ಮಟ್ಟದಲ್ಲಿ ಜಿಲ್ಲೆ ವಿಭಜನೆಯನ್ನು ಕೈ ಬಿಡಲಾಗಿದೆ ಎಂದು ತಿಳಿಸಿದ್ದರು. ಆದರೆ ಈಗಿನ ರಾಜಕಾರಣಿಗಳು ಈ ವಿಷಯ ಪದೇ ಪದೇ ಕೆದಕುತ್ತಿದ್ದು, ಒಂದು ವೇಳೆ ಗೋಕಾಕ ಜಿಲ್ಲೆಯಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಜಿಲ್ಲಾ ವಿಭಜನೆಯಿಂದ ಯಾವುದೇ ಹಾನಿಯಾದರೆ ಸರಕಾರ ಮತ್ತು ಹೇಳಿಕೆ ನೀಡುವವರೇ ನೇರ ಹೊಣೆಗಾರರಾಗುತ್ತಾರೆ. ಬೇಜವಾಬ್ದಾರಿ ಹೇಳಿಕೆಯನ್ನು ಕೂಡಲೇ ನಿಲ್ಲಿಸಬೇಕು, ಅಧಿಕಾರ ಇಲ್ಲದ ಸಮಯದಲ್ಲಿ ಒಂದು ತರಹಾ, ಬಂದ ಮೇಲೆ ಒಂದು ತರಹಾ ಇರುತ್ತಾರೆ. ಇವರ ನಡುವೆ ಜನಸಾಮಾನ್ಯರು ಪ್ರಜಾಪ್ರಭುತ್ವವನ್ನೇ ಮರೆತಿದ್ದಾರೆ ಎಂದು ಪರೋಕ್ಷವಾಗಿ ಸಚಿವರನ್ನು ತರಾಟೆಗೆ ತೆಗೆದುಕೊಂಡು ಬೈಲಹೊಂಗಲವನ್ನೇ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಸರಕಾರ ಒಂದು ವೇಳೆ ಆಡಳಿತಾತ್ಮಕ ಹಿತದೃಷ್ಠಿಯಿಂದ ಅಖಂಡ ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡುವದಾದರೆ ಉಪವಿಭಾಗ ಕೇಂದ್ರ ಬೈಲಹೊಂಗಲವನ್ನೇ ಜಿಲ್ಲಾ ಕೇಂದ್ರವನ್ನಾಗಿ ಪರಿಗಣಿಸಬೇಕು. ಒಂದು ವೇಳೆ ಸರಕಾರ ಪ್ರಭಾವಿ ಮುಖಂಡರ ಮಾತಿಗೆ ಮನ್ನಣೆ ನೀಡಿದರೆ ಉಗ್ರ ಪ್ರತಿಭಟನೆ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದರು.
ಶಾಖಾ ಮೂರು ಸಾವಿರ ಮಠದ ಪ್ರಭು ನೀಲಕಂಠ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಈ ಭಾಗದ ಜನತೆ, ಮುಖಂಡರುಗಳು ಕಳೆದ ಮೂರು ದಶಕಗಳಿಂದ ಬೆಳಗಾವಿ ಜಿಲ್ಲೆಯು ಅಖಂಡವಾಗಿರಬೇಕು. ಒಂದು ವೇಳೆ ವಿಭಜನೆ ಮಾಡುವದಾದರೆ ಉಪವಿಭಾಗ ಕೇಂದ್ರವನ್ನು ಆಧರಿಸಿ ಬೈಲಹೊಂಗಲವನ್ನೇ ಜಿಲ್ಲಾ ಕೇಂದ್ರವಾಗಿ ಮಾಡಬೇಕು ಎಂದರು.
ಮಹಾಂತೇಶ ತುರಮರಿ, ಮಡಿವಾಳಪ್ಪ ಹೋಟಿ, ರುದ್ರಪ್ಪ ಹೊಸಮನಿ, ಬಿ.ಬಿ.ಗಣಾಚಾರಿ, ಬಾಬುಸಾಬ ಸುತಗಟ್ಟಿ, ಮಹಾಂತೇಶ ಮತ್ತಿಕೊಪ್ಪ, ಸುರೇಶ ವಾಲಿ, ಮುರಗೇಶ ಗುಂಡ್ಲೂರ, ಮಹೇಶ ಹರಕುಣಿ, ಚಿದಾನಂದ ಚಿನಿವಾಲರ, ಸೋಮನಾಥ ಸೊಪ್ಪಿಮಠ, ಶ್ರೀಶೈಲ ಯಡಳ್ಳಿ ಇದ್ದರು.