ಬೆಂಗಳೂರು: 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ವಿನೂತನ ಮಾದರಿಯ ನೂತನ ಏಳು ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಆದೇಶಸಿದೆ.
ಸದ್ಯವಿರುವ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೇ, ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ ಈ ವಿಶ್ವ ವಿದ್ಯಾಲಯಗಳು ಸ್ಥಾಪನೆಯಾಗಲಿವೆ.
ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸ್ಥಾಪನೆಗೊಂಡಿರುವ ವಿನೂತನ ಮಾದರಿಯ ಈ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಮತ್ತು ಪ್ರಸ್ತುತ ಏಕಾತ್ಮಕ ಸ್ವರೂಪದ ವಿಶ್ವವಿದ್ಯಾಲಯವಾಗಿರುವ ಮಂಡ್ಯ ವಿಶ್ವವಿದ್ಯಾಲಯವನ್ನು ಸಂಯೋಜಿತ ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸುವ ಸಂಬಂಧ ಆರ್ಥಿಕ, ಭೌತಿಕ ಹಾಗೂ ಮಾನವ ಸಂಪನ್ಮೂಲಗಳ ಕುರಿತಂತೆ ಆದೇಶ ಹೊರಡಿಸಲಾಗಿದೆ.
ನೂತನ ವಿಶ್ವವಿದ್ಯಾಲಯಗಳು ಪ್ರಸ್ತುತ ಇರುವ ಸ್ನಾತಕೋತ್ತರ ಕೇಂದ್ರಗಳಲ್ಲಿಯೇ ಕಾರ್ಯನಿರ್ವಹಿಸಬೇಕು.
ಇವುಗಳ ಸ್ಥಾಪನೆಗಾಗಿ ಯಾವುದೇ ಜಮೀನನ್ನು ಖರೀದಿಸುವಂತಿಲ್ಲ. ಹೊಸ ಕಟ್ಟಡಗಳನ್ನೂ ನಿರ್ಮಿಸುವಂತಿಲ್ಲ. ಈಗಾಗಲೇ ಮಾತೃ ವಿಶ್ವವಿದ್ಯಾಲಯಗಳಿಗೆ ಮಂಜೂರಾಗಿರುವ ಹುದ್ದೆಗಳಲ್ಲಿ ಅವಶ್ಯಕ ಹುದ್ದೆಗಳನ್ನು ಹೊಸ ವಿಶ್ವವಿದ್ಯಾಲಯಗಳಿಗೆ ಬಳಸಿಕೊಳ್ಳುವುದು ಹಾಗೂ ಯಾವುದೇ ಹೊಸ ಹುದ್ದೆಗಳನ್ನು ಸೃಷ್ಟಿಸುವಂತಿಲ್ಲ ಎಂದು ಸರ್ಕಾರ ಸೂಚನೆ ನೀಡಿದೆ.
ನೂತನ ವಿಶ್ವವಿದ್ಯಾಲಯಗಳು ಮತ್ತು ಸಂಬಂಧಪಟ್ಟ ಮಾತೃ ವಿಶ್ವವಿದ್ಯಾಲಯಗಳಿಗೆ ಹಂಚಿಕೆಯಾಗಿರುವ ಪ್ರಾದೇಶಿಕ ಅಧಿಕಾರ ವ್ಯಾಪ್ತಿ ಮತ್ತು ಈ ಪ್ರಾದೇಶಿಕ ಅಧಿಕಾರ ವ್ಯಾಪ್ತಿಗೆ ಒಳಪಡುವ ಸಂಯೋಜಿತ ಕಾಲೇಜುಗಳ ಆಧಾರದ ಮೇಲೆ ಬೋಧಕ/ಬೋಧಕೇತರ ಹುದ್ದೆಗಳನ್ನು ನಿರ್ದಿಷ್ಟ ಅನುಪಾತದೊಂದಿಗೆ ಮರು ಹಂಚಿಕೆ ಮಾಡಲು ಸಂಬಂಧಪಟ್ಟಂತ ಆಯಾ ಮಾತೃ ವಿಶ್ವವಿದ್ಯಾಲಯಗಳ ಕುಲಸಚಿವರು ಈ ಆದೇಶ ಹೊರಡಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಸರ್ಕಾರಕ್ಕೆ ಅಗತ್ಯ ಪ್ರಸ್ತಾವನೆ ಸಲ್ಲಿಸಬೇಕಿದೆ.
ಈ ವಿಶ್ವವಿದ್ಯಾಲಯಗಳಿಗೆ ಆಯವ್ಯಯದಲ್ಲಿ ಮಂಜೂರಾಗಿರುವ 2 ಕೋಟಿ ರೂ ಮೊತ್ತವನ್ನು ಸರ್ಕಾರದಿಂದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿಲೀನಾತಿ ಆದೇಶವನ್ನು ಹೊರಡಿಸಿದ ನಂತರ ಬಿಡುಗಡೆಗೊಳಿಸಬೇಕು ಎಂದು ಆದೇಶದಲ್ಲಿ ಷರತ್ತು ವಿಧಿಸಲಾಗಿದೆ.