ಬೆಂಗಳೂರು: ರಾಜ್ಯ ಸರ್ಕಾರದಿಂದ ನೂತನ ಬಾಗಲಕೋಟ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಆದೇಶ ಹೊರಡಿಸಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೊಂದು ವಿಶ್ವ ವಿದ್ಯಾಲಯ ಸ್ಥಾಪನೆ ಆದಂತೆ ಆಗಿದೆ.
ಈ ಕುರಿತು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಪತ್ರವನ್ನು ಹೊರಡಿಸಿದ್ದಾರೆ. ಕಾಲೇಜುಗಳ ಮೇಲ್ವಿಚಾರಣೆಯನ್ನು ಸುಧಾರಿಸಲು ರಾಜ್ಯದ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ವಿನೂತನ ಮಾದರಿಯ 7 ವಿಶ್ವ ವಿದ್ಯಾಲಯಗಳನ್ನು ಚಾಮರಾಜನಗರ, ಬೀದರ, ಹಾವೇರಿ, ಕೊಡಗು, ಹಾಸನ, ಕೊಪ್ಪಳ ಮತ್ತು ಬಾಗಲಕೋಟ ಜಿಲ್ಲೆಯಲ್ಲಿ ಸ್ಥಾಪಿಸಲಾಗುವದು ಎಂಬುದಾಗಿ 2022-23ನೇ ಸಾಲಿನ ಅಯವ್ಯಯ ಘೋಷಣೆಯಲ್ಲಿ ಘೋಷಿಸಲಾಗಿತ್ತು ಎಂದಿದ್ದಾರೆ.
ಅದರಂತೆ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಿಗಿಂತ ಭಿನ್ನವಾಗಿ ತಂತ್ರಜ್ಞಾನದ ಗರಿಷ್ಠ ಬಳಕೆಯೊಂದಿಗೆ ಹೆಚ್ಚುವರಿ ಮಾನವ ಸಂಪನ್ಮೂಲ ಉಪಯೋಗಿಸದೇ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಬೇರ್ಪಟ್ಟ ನೂತನ ಬಾಗಲಕೋಟ ವಿಶ್ವವಿದ್ಯಾಲಯವನ್ನು ಕೇಂದ್ರ ಸ್ಥಾನವನ್ನು ಜಮಖಂಡಿ, ಬಾಗಲಕೋಟ ಜಿಲ್ಲೆಯಲ್ಲಿ ಸ್ಥಾಪಿಸಲು ಆದೇಶಿಸಿದ್ದಾರೆ.
ಜೊತೆಗೆ ನೂತನ ಬಾಗಲಕೋಟ ವಿಶ್ವವಿದ್ಯಾಲಯಕ್ಕೆ ಮಾತೃ ವಿವಿಯಾದಂತ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಿಂದ ವರ್ಗಾವಣೆ ಆಗಬೇಕಾಗಿರುವ ಜಮೀನಿನ ದಾಖಲೆಗಳನ್ನು ಒಂದು ತಿಂಗಳೊಳಗಾಗಿ ವರ್ಗಾಯಿಸುವಂತೆ, ಸಂಬಂಧಿಸಿದ ಜಿಲ್ಲೆಯ ಜಿಲ್ಲಾಧಿಕಾರಿಗಳು ಜಮೀನಿನ ವರ್ಗಾವಣೆಗೆ ಅಗತ್ಯ ಸಹಕಾರ ನೀಡುವಂತೆಯೂ ಸೂಚಿಸಿದ್ದಾರೆ.