ಮಣಿಪಾಲ, ೨೮: ಅಪಘಾತಕ್ಕೀಡಾಗಿ ಮೆದುಳು ನಿಷ್ಕ್ರೀಯಗೊಂಡ ಮಹಿಳೆಯೊಬ್ಬರ ಅಂಗಾಂಗ ದಾನ ಮಾಡಲಾಗಿದ್ದು, ಸಾವಿನಲ್ಲೂ ಸಾರ್ಥಕ್ಯ ಮೆರೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ 44 ವರ್ಷದ ಲಲಿತಮ್ಮ ಅವರು ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರನ್ನು ರಕ್ಷಿಸಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಿದರೂ ಚೇತರಿಸಿಕೊಳ್ಳುವ ಲಕ್ಷಣ ಕಂಡುಬರಲಿಲ್ಲ. “ಮಾನವ ಅಂಗಾಂಗ ಕಸಿ ಕಾಯ್ದೆ 1994” ರನ್ವಯ ಲಲಿತಮ್ಮ ಅವರನ್ನು ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ವೈದ್ಯರ ತಂಡವು ರೋಗಿಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದರು.
ಕುಟುಂಬ ಸದಸ್ಯರು ಇತರ ರೋಗಿಗಳ ಜೀವ ಉಳಿಸಲು ಕಾರ್ಯಸಾಧ್ಯವಾದ ಅಂಗಗಳನ್ನು ದಾನ ಮಾಡಲು ತಮ್ಮ ಒಪ್ಪಿಗೆ ವ್ಯಕ್ತಪಡಿಸಿದರು. “ಜೀವಸಾರ್ಥಕತೆ ಪ್ರೋಟೋಕಾಲ್ ಮತ್ತು ನಿರ್ಧಾರ” ಗಳ ಪ್ರಕಾರ, ದಾನ ಮಾಡಿದ ಶ್ವಾಸಕೋಶಗಳನ್ನು ಹೈದರಾಬಾದ ಕಿಮ್ಸ, ಯಕೃತ್ ಅನ್ನು ಬೆಂಗಳೂರಿನ ಸ್ಪರ್ಶ, ಒಂದು ಮೂತ್ರಪಿಂಡವನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಕಳುಹಿಸಲಾಯಿತು. ಒಂದು ಮೂತ್ರಪಿಂಡ ಮತ್ತು ಎರಡು ಕಾರ್ನಿಯಾಗಳನ್ನು ಮಣಿಪಾಲದಲ್ಲಿನ ನೋಂದಾಯಿತ ರೋಗಿಗಳಿಗೆ ಬಳಸಲಾಯಿತು.
ಈ ಕುರಿತು ಮಾಹಿತಿ ನೀಡಿದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಜೀವ ಉಳಿಸುವ ನಿಟ್ಟಿನಲ್ಲಿ ಅಂಗದಾನ ಶ್ರೇಷ್ಠ ಕೆಲಸವಾಗಿದ್ದು, ಅತ್ಯಂತ ಮಹತ್ವ ಪಡೆದಿದೆ ಎಂದು ಅಂಗಾಂಗ ದಾನ ಮಾಡಲು ನಿರ್ಧರಿಸಿದ ಲಲಿತಮ್ಮ ಅವರ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದರು.