ಶಿವಮೊಗ್ಗ, 27- ರಾಜ್ಯದ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಒಳಮೀಸಲಾತಿ ನಿರ್ಧಾರವನ್ನು ಖಂಡಿಸಿ ರಾಜ್ಯಾದ್ಯಂತ ಹೋರಾಟ, ಪ್ರತಿಭಟನೆ ತೀವ್ರವಾಗಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಹಿಂಸಾಚಾರ ನಡೆದು ಪೊಲೀಸರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಅವರ ನಿವಾಸಕ್ಕೆ ಅನೇಕ ಮಂದಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದಲ್ಲದೇ ಮನೆಗೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿ ಮಾಡಿದ್ದಾರೆ. ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರ ಫ್ಲೆಕ್ಸಗಳನ್ನು ಹರಿದು ಹಾಕಿ ಆಕ್ರೋಷ ಹೊರ ಹಾಕಿದ್ದಾರೆ. ಟಾಯರ್, ಸೀರೆಗಳನ್ನು ಸುಟ್ಟು ದಾಂಧಲೆ ನಡೆಸಲಾಯಿತು. ಗಲಭೆ ತಡೆಯಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು ಹಲವರು ಗಾಯಗೊಂಡಿದ್ದಾರೆ.
ಒಳ ಮೀಸಲಾತಿ ಪ್ರಮಾಣ ಕಡಿಮೆ ಮಾಡಿರುವುದನ್ನು ಖಂಡಿಸಿ ಇಂದು ಶಿಕಾರಿಪುರದಲ್ಲಿ ಬಂಜಾರ, ಕೊರಚ, ಕೊರಮ, ಭೋವಿ ಸಮುದಾಯದವರು ತೀವ್ರ ಪ್ರತಿಭಟನೆ ನಡೆಸಿದರು. ರಾಜ್ಯದ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಪಟ್ಟಣದಲ್ಲಿ ಬಿಜೆಪಿ, ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ಸೇರಿ ಬಿಜೆಪಿ ನಾಯಕರ ಫ್ಲೆಕ್ಸ್ ಗಳು, ಬ್ಯಾನರ್ ಗಳನ್ನು ಹರಿದು ಹಾಕಿದರು. ಟೈರ್, ಸೀರೆಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರ ಮನೆಯನ್ನು ಗುರಿಯಾಗಿಸಿಕೊಂಡು ಬಂಜಾರ ಸಮುದಾಯದ ಸದಸ್ಯರು ಕಲ್ಲು ತೂರಾಟ ನಡೆಸಿದರು. ರಾಜ್ಯ ಸರ್ಕಾರವು ಪರಿಶಿಷ್ಟ ಸಮುದಾಯಗಳಿಗೆ (ಎಸ್‌ಸಿ) ಒಳ ಮೀಸಲಾತಿ ಘೋಷಿಸಿರುವುದನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪಟ್ಟಣದಲ್ಲಿ ಕಲಂ ೧೪೪ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪ್ರತಿಭಟನೆಯಲ್ಲಿ ಕೆಲವು ಪೊಲೀಸರು ಗಾಯಗೊಂಡಿದ್ದಾರೆ. ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಲಮಾಣಿ ಅಥವಾ ಲಂಬಾಣಿ ಎಂದು ಕರೆಯಲ್ಪಡುವ ಬಂಜಾರ ಸಮುದಾಯದ ಹಲವರು ಗಾಯಗೊಂಡಿದ್ದಾರೆ.
ಬಹುತೇಕ ಯುವಕರು ಯಡಿಯೂರಪ್ಪ ಅವರ ಮನೆ ಬಳಿ ನುಗ್ಗಿ ಕಲ್ಲು ತೂರಾಟ ನಡೆಸಿ, ಕಿಟಕಿ ಗಾಜುಗಳಿಗೆ ಹಾನಿ ಮಾಡಿದ್ದು, ಪೊಲೀಸರು ಕ್ರಮ ಕೈಗೊಂಡರು. ಪರಿಸ್ಥಿತಿ ನಿಯಂತ್ರಣ ಮೀರುತ್ತಿರುವುದನ್ನು ಗಮನಿಸಿ ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ಕರೆಸಲಾಯಿತು. ಬಂಜಾರ ಸಮುದಾಯಕ್ಕೆ ಸೇರಿದ ಪರಿಶಿಷ್ಟ ಜಾತಿಗಳಿಗೆ ‘ಕಡಿಮೆ’ ಮೀಸಲಾತಿ ನೀಡಲಾಗಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ತಮ್ಮ ಆಕ್ರೋಶವನ್ನು ಹೊರಹಾಕಿದರು.
ಪರಿಶಿಷ್ಟ ಸಮುದಾಯಗಳ ಒಳ ಮೀಸಲಾತಿಗೆ ಸಂಬಂಧಿಸಿದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಕಳೆದ ವಾರ ನಿರ್ಧರಿಸಿದೆ. ಪರಿಶಿಷ್ಟ ಜಾತಿಗೆ ಶೇ 15 ರಿಂದ ಶೇ 17 ಕ್ಕೆ ಮೀಸಲಾತಿ ಹೆಚ್ಚಿಸಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಸ್‌ಸಿ ಎಡ ಪ್ರವರ್ಗಕ್ಕೆ ಶೇ 6, ಎಸ್‌ಸಿ ಬಲ ಪಂಗಡಕ್ಕೆ ಶೇ.5.5, ಅಸ್ಪೃಶ್ಯರಿಗೆ ಶೇ 4.5 ಮತ್ತು ಇತರರಿಗೆ ಶೇ. 1ರಷ್ಟು ಮೀಸಲಾತಿ ಘೋಷಿಸಿದ್ದಾರೆ. ಈ ಪ್ರಸ್ತಾವನೆಯನ್ನು ಸಂವಿಧಾನದ ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸುವಂತೆ ಶಿಫಾರಸು ಮಾಡಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದಿದೆ.
ತಾಲ್ಲೂಕು ಬಂಜಾರ ಸಮಾಜದ ನೇತೃತ್ವದಲ್ಲಿ ಮುಂಜಾನೆ ಶಿಕಾರಿಪುರದ ಅಂಬೇಡ್ಕರ್ ಸರ್ಕಲ್‌ನಲ್ಲಿ ಜಮಾವಣೆಗೊಂಡ ಸಾವಿರಾರು ಪ್ರತಿಭಟನಾಕಾರರು, ಸದಾಶಿವ ಆಯೋಗದ ವರದಿ ಅನ್ವಯ ಒಳಮೀಸಲಾತಿಗೆ ಶಿಫಾರಸು ಮಾಡುವ ಮೂಲಕ ನಮ್ಮ ಬದುಕು ಕಿತ್ತುಕೊಳ್ಳಲಾಗಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲಿಯೇ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರ ಇರುವ ಫ್ಲೆಕ್ಸ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲಿಂದ ಪಟ್ಟಣದ ಮಾಳೇರಕೇರಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸದತ್ತ ಪ್ರತಿಭಟನಾಕಾರರು ಗುಂಪು ಗುಂಪಾಗಿ ಹೊರಟರು. ಅವರನ್ನು ತಡೆಯಲು ಪೊಲೀಸರು ಮೂರು ಕಡೆ ಬ್ಯಾರಿಕೇಡ್ ಅಳವಡಿಸಿದ್ದರು. ಎರಡು ಬ್ಯಾರಿಕೇಡ್‌ಗಳನ್ನು ಮುರಿದು ಮುಂದಕ್ಕೆ ಬಂದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ಮಾಡಿದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಕಲ್ಲು ಹಾಗೂ ಚಪ್ಪಲಿ ತೂರಾಟ ನಡೆಸಿದರು. ಇದರಲ್ಲಿ ಶಿಕಾರಿಪುರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ ಲಕ್ಷ್ಮಣ, ನಗರ ಠಾಣೆ ಪಿಎಸ್‌ಐ ಮಂಜುನಾಥ ಕೊಪ್ಪಲೂರು, ಕಾನ್‌ಸ್ಟೆಬಲ್‌ಗಳಾದ ಶಂಕರಗೌಡ ಹಾಗೂ ಕಾಂತರಾಜು ಅವರ ತಲೆಗೆ ಕಲ್ಲೇಟು ಬಿದ್ದಿವೆ.
ಪ್ರತಿಭಟನಾಕಾರರು ಶಿಕಾರಿಪುರ ಪಟ್ಟಣದಲ್ಲಿ ಅಳವಡಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಫ್ಲೆಕ್ಸ್‌ಗಳನ್ನು ಕಿತ್ತು ಹರಿದು ಹಾಕಿದರು. ಫೆಬ್ರುವರಿ 27ರಂದು ಯಡಿಯೂರಪ್ಪ ಅವರ ಹುಟ್ಟುಹಬ್ಬದ ದಿನ ವಿತರಿಸಿದ್ದ ಸೀರೆಗಳನ್ನು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಪರಿಸ್ಥಿತಿ ಈಗ ಹತೋಟಿಗೆ ಬಂದಿದ್ದು, ಎಸ್ಪಿ ಜಿ.ಕೆ.ಮಿಥುನಕುಮಾರ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದಾರೆ ಎನ್ನಲಾಗಿದೆ.