ಕಲಬುರಗಿ: ‘ನಾನು, ನನ್ನ ಮಗ ಪ್ರಿಯಾಂಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಮಾನ ಮಾಡಿದ್ದಾಗಿ ಹೇಳುತ್ತಾರೆ. ಅವರು ದೇಶದ ಪ್ರಧಾನಿ. ಅವರಿಗೆ ಅವಮಾನ ಮಾಡಲು ಹೇಗೆ ಆಗುತ್ತದೆ. ಅವರು ಯಾರೇ ಆಗಿದ್ದರೂ ನಮ್ಮವರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕರ್ನಾಟಕದ ಮಾನ ಮರ್ಯಾದೆಯನ್ನು ಕಾಂಗ್ರೆಸ್ ನಾಯಕರು ಮರೆತಿದ್ದಾರೆ. ಮರ್ಯಾದೆಗೆ ಧಕ್ಕೆ ತಂದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆಳಂದ ಪಟ್ಟಣದಲ್ಲಿ ಬುಧವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಖರ್ಗೆ, ‘ಪ್ರಧಾನಿ ಸ್ಥಾನದಲ್ಲಿ ಯಾರೇ ಇದ್ದರೂ ನಮ್ಮವರು. ಅವರನ್ನು ಅವಮಾನ ಮಾಡಲು ಆಗುವುದಿಲ್ಲ. ಆದರೆ, ನೀವು ಕರ್ನಾಟಕಕ್ಕೆ ಅವಮಾನ ಮಾಡುತ್ತಿದ್ದೀರಾ. ನಮಗೆ ಏನು ಕೊಟ್ಟಿದ್ದೀರಾ? ನಾವು ಕೇಂದ್ರೀಯ ವಿಶ್ವವಿದ್ಯಾಲಯ ತಂದಿದ್ದೇವೆ. ಈಗ ಅಲ್ಲಿ ಅಧ್ಯಯನ ವಿಭಾಗಗಳು ಕಡಿಮೆ ಆಗಿವೆ. ಖಾಲಿ ಹುದ್ದೆಗಳು ಭರ್ತಿ ಮಾಡಿಕೊಳ್ಳುತ್ತಿಲ್ಲ. ಅರ್ಹತೆ ಇದ್ದರೂ ಸ್ಥಳೀಯರನ್ನು ನೇಮಿಸಿಕೊಳ್ಳತ್ತಿಲ್ಲ ಎಂದು ತಿಳಿಸಿದರು.
ಬಾಯಿ ಬಿಟ್ಟರೆ ಹಿಂದೂ- ಮುಸ್ಲಿಮ ಎನ್ನುತ್ತಾರೆ. ಪ್ರಜಾಪ್ರಭುತ್ವ ಬಂದ 70 ವರ್ಷಗಳ ವರೆಗೆ ರಾಜ್ಯದ ಜನತೆ ಜನರು ವಿನಾಕಾರಣ ಜಗಳವಾಡಿದ ನಿದರ್ಶನಗಳು ಇಲ್ಲ. ಹೊರಗಿನಿಂದ ಬಂದವರು ಇಲ್ಲಿನ ಜನರ ಭಾವನೆಗಳನ್ನು ಕೆರಳಿಸಿ, ಅವರ ನಡುವೆ ಬೆಂಕಿ ಹಾಕಿ, ಜಗಳ ಹಚ್ಚುತ್ತಿದ್ದಾರೆ. ಜಾತಿ, ಧರ್ಮಗಳ ನಡುವೆ ಕಲಹವನ್ನು ತಂದಿಟ್ಟು ತಮ್ಮ ಮತಗಳನ್ನು ಒಗ್ಗೂಡಿಸಿಕೊಳ್ಳುತ್ತಿದ್ದೀರಾ ಎಂದು ಅವರು ಆರೋಪಿಸಿದರು.
ಮೋದಿ ಅವರಿಗೆ ಕರ್ನಾಟಕದ ಮೇಲೆ ಅದರಲ್ಲೂ ವಿಶೇಷವಾಗಿ ಕಲಬುರಗಿ ಮೇಲೆ ಎಲ್ಲಿಲ್ಲದ ಪ್ರೀತಿ ಬಂದಿದೆ. ಒಂದು ಜಿಲ್ಲೆಯ ಚುನಾವಣೆಗಾಗಿ ನಾಲ್ಕು ಬಾರಿ ಭೇಟಿ ಕೊಟ್ಟಿದ್ದಾರೆ. ದೊಡ್ಡ– ದೊಡ್ಡ ನೀರಾವರಿ ಯೋಜನೆಗಳು, ಕಾರ್ಖಾನೆಗಳ ಚಾಲನೆಗಾಗಿ ಬಂದಿದ್ದರೇ ನಿಮಗೆ ಧನ್ಯವಾದಗಳು ಹೇಳುತ್ತಿದ್ದೇವು ಎಂದರು.
ದೇವತಾ ಮನುಷ್ಯ, ಸಾಧು, ಸಂತ ಎನಿಸಿಕೊಂಡು ಕಾವಿ ತೊಟ್ಟಿರುವವರು ಮನುಷ್ಯ ಕುಲ ಉದ್ಧಾರ ಮಾಡುತ್ತಿದ್ದಿರೋ ಅಥವಾ ಮನುಷ್ಯ ಕುಲದ ನಡುವೆ ಜಗಳ ತಂದಿಡುತ್ತಿದ್ದಿರೋ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರನ್ನು ಪ್ರಶ್ನಿಸಿದರು. ಶಾಂತಿ ಇರುವಲ್ಲಿಗೆ ಹೋಗಿ, ನಮ್ಮ ಮಾತು ಕೇಳದಿದ್ದರೆ ಬುಲ್ಡೋಜರ್ ಹಾಯಿಸುವುದಾಗಿ, ದೇಶದಲ್ಲಿ ಇರುವಂತಿಲ್ಲ ಎಂಬ ಹೇಳಿಕೆ ಕೋಡುತ್ತಿದ್ದಾರೆ. ಈ ಹಿಂದೆ ಯೋಗಿ ಆದಿತ್ಯನಾಥ ಅವರು ಸಂಸದರು ಆಗಿದ್ದಾಗ ನನ್ನ ಭಾಷಣದ ಮಾತುಗಳಿಗೆ ಸ್ಪೀಕರ್ ಮುಂದೆ ಗೊಳೊ ಅಂತ ಕಣ್ಣೀರು ಹಾಕಿದ್ದರು’ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೋದಲೆಲ್ಲ ನನ್ನ ಹಿಂದೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಇದ್ದಾರೆ ಎನ್ನುತ್ತಿದ್ದಾರೆ ಹೊರತು ಜನರಿದ್ದಾರೆ ಎನ್ನುತ್ತಿಲ್ಲ. ಅವರು ರಾಜ್ಯಕ್ಕೆ ಬಂದು ಮುಖ್ಯಮಂತ್ರಿ ಆಗುತ್ತಾರೆ? ಇಲ್ಲಿನವರೇ ಶಾಸಕರು, ಸಚಿವರು ಆಗುತ್ತಾರೆ. ನೀವೇಕೆ ಇಷ್ಟೊಂದು ಚಡಪಡಿಸುತ್ತಿದ್ದೀರಾ? ಎಂದು ವ್ಯಂಗ್ಯವಾಡಿದರು. ಮೋದಿ– ಶಾ ಹೇಳುವ ಡಬಲ್ ಎಂಜಿನ್ ಸರ್ಕಾರದ ಎರಡೂ ಕಡೆಯ ಡ್ಯುವೆಲ್ ಕೆಟ್ಟು ಹೋಗಿದೆ. ಹೀಗಾಗಿ, ಕೇಂದ್ರದ 30 ಸಚಿವರು ಒಂದು ಜೀವದ ತೆಕ್ಕೆಗೆ ಮುಗಿ ಬಿದ್ದಿದ್ದಾರೆ ಎಂದು ಟೀಕಿಸಿದರು.