ಕಾರವಾರ : ತಂದೆ ಸಂಪಾದಿಸಿದ ಆಸ್ತಿಯಲ್ಲಿ ತನ್ನ ಪಾಲನ್ನು ಕೊಡಬೇಕೆಂದು ಒತ್ತಾಯ ಮಾಡುತ್ತಿದ್ದ ಹಿರಿಯ ಮಗನು ತನ್ನ ತಂದೆ, ತಾಯಿ, ಸಹೋದರ ಮತ್ತು ಅತ್ತಿಗೆಯನ್ನು ನಡು ರಸ್ತೆಯಲ್ಲೇ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಹಾಡವಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಜರುಗಿದೆ.
ಶ್ರೀಧರ ಭಟ್ ತನ್ನ ಪತ್ನಿಯ ಸಂಬಂಧಿಕ ವಿನಯ ಭಟ್ ನೊಂದಿಗೆ ಸೇರಿ ತನ್ನ ತಂದೆ ಶಂಬು ಭಟ್ 65, ತಾಯಿ ಮಹಾದೇವಿ ಭಟ್ 60, ಸಹೋದರ ರಾಜೀವ ಭಟ್, 34, ಮತ್ತು ರಾಜೀವ ಅವರ ಪತ್ನಿ ಕುಸುಮ ಭಟ್, 30 ಅವರನ್ನು ಕಬ್ಬಿಣದ ಹರಿತವಾದ ಮಚ್ಚು ಥರದ ಆಯುಧದಿಂದ ಕುತ್ತಿಗೆ, ಎದೆ, ಹೊಟ್ಟೆ ಮತ್ತು ದೇಹದ ಇತರ ಭಾಗಗಳ ಮೇಲೆ ಹಲ್ಲೆ ಮಾಡಿ ಬರ್ಬರ ಹತ್ಯೆ ಮಾಡಿದ್ದಾನೆ. ಈ ಕೃತ್ಯ ಸಂಜೆ 4 ಗಂಟೆಯಿಂದ 5 ಗಂಟೆಯ ಮಧ್ಯೆ ಸಂಭವಿಸಿದೆ.
“ಸಮದರ್ಶಿ” ಯೊಂದಿಗೆ ಮಾತನಾಡಿದ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ಇನ್ಸಪೆಕ್ಟರ್ ಚಂದನ ಗೋಪಾಲ್ ಅವರು ಹತ್ಯೆಯಾದ ಶಂಬು ಭಟ್ ಅವರಿಗೆ ಪಿತ್ರಾರ್ಜಿತವಾಗಿ ಬಂದ ಸುಮಾರು ಎರಡು ಎಕರೆ ತೋಟ ಮತ್ತು ತೋಟದಲ್ಲಿ ಒಂದು ಮನೆಯಿತ್ತು. ಮದುವೆಯ ನಂತರ ಪತ್ನಿಯೊಂದಿಗೆ ಪ್ರತ್ಯೇಕ ವಾಸವಿದ್ದ ಶ್ರೀಧರ ಭಟ್ ನು ಪತ್ನಿ ಮತ್ತು ಆಕೆಯ ಮನೆಯವರ ಕುಮ್ಮಕ್ಕುನಿಂದ ತಂದೆಯ ಆಸ್ತಿಯಲ್ಲಿ ಪಾಲು ಕೇಳಿ ಜಗಳವಾಡುತ್ತಿದ್ದ. ಆದರೆ ತಂದೆ ಆಸ್ತಿ ಹಂಚಿಕೆಗೆ ಒಪ್ಪಿರಲಿಲ್ಲ.
ಶುಕ್ರವಾರ ಸಂಜೆ ಪತ್ನಿಯ ಸಂಬಂಧಿಕ ವಿನಯ ಭಟ್ ನೊಂದಿಗೆ ತಂದೆಯ ಮನೆಗೆ ತೆರಳಿದ ಶ್ರೀಧರನು ದೊಡ್ಡ ಮಟ್ಟದಲ್ಲಿ ಕೂಗಾಡಿ ಗಲಾಟೆ ಮಾಡಿ ಎಲ್ಲರನ್ನೂ ಮನೆಯಿಂದ ಹೊರಗೆ ಕರೆದುಕೊಂಡು ಬಂದು ತಾನು ಮೊದಲೇ ತಂದು ಮನೆಯ ಹೊರಗಿಟ್ಟಿದ್ದ ಮಚ್ಚಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಹತ್ಯೆಯ ನಂತರ ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಪೊಲೀಸರು ಹತ್ಯೆಗೆ ಬಳಸಿದ ಆಯುಧಗಳನ್ನು ಮತ್ತು ಶ್ರೀಧರ ಭಟ್ ನನ್ನೂ ವಶಕ್ಕೆ ಪಡೆದಿದ್ದಾರೆ. ಪಲಾಯನ ಮಾಡಿರುವ ವಿನಯ್ ನ ಶೋಧಕ್ಕೆ ಬಲೆ ಬೀಸಲಾಗಿದೆ.
ಶಾಂತಿಪ್ರಿಯ ಜಿಲ್ಲೆಯೆಂದೇ ಖ್ಯಾತಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಥರದ ಅಪರಾಧ ನಡೆದಿದ್ದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಘಟನೆ ನಡೆದ ಸ್ಥಳಕ್ಕೆ ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಭೆಟ್ಟಿ ನೀಡಿದ್ದರು.